ದರ್ಭಾಂಗ್(ಬಿಹಾರ): ಭಾರತದಲ್ಲಿ ರಾಷ್ಟ್ರೀಯ ಕ್ರೀಡೆಗಿಂತ ಹೆಚ್ಚಿನ ಪ್ರಾಧಾನ್ಯತೆ ಪಡೆದಿರುವ ಕ್ರಿಕೆಟ್ ಆಟಕ್ಕೆ ಇಂದಿನ ಯುವ ಜನತೆ ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ಇದೇ ಆಟವನ್ನು ಕೊಂಚ ವಿಶೇಷವಾಗಿ ಬಿಹಾರದ ದರ್ಭಾಂಗ ಜಿಲ್ಲೆಯ ಕಾಮೇಶ್ವರ ಸಿಂಗ್ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ಆಡಿದ್ದಾರೆ.
ಕಾಮೇಶ್ವರ ಸಿಂಗ್ ಸಂಸ್ಕೃತ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಧೋತಿ ಹಾಗೂ ಕುರ್ತಾ ಧರಿಸಿ ಜಂಟಲ್ಮೆನ್ ಆಟವನ್ನು ಆಡಿ ಗಮನ ಸೆಳೆದಿದ್ದಾರೆ. ಈ ಪಂದ್ಯವನ್ನು ನೋಡಿದವರಿಗೆ ಹಿಂದಿಯ ಜನಪ್ರಿಯ ಸಿನಿಮಾ 'ಲಗಾನ್' ನೆನಪಾಗಿದ್ದು ಸುಳ್ಳಲ್ಲ..!
ಹತ್ತು ಓವರ್ನ ಈ ಪಂದ್ಯದಲ್ಲಿ ಎಲ್ಲ ಆಟಗಾರರು ಧೋತಿ ಧರಿಸಿ ಮೈದಾನಕ್ಕಿಳಿದಿದ್ದು ವಿಶೇಷವಾಗಿತ್ತು. ಭಾರತೀಯ ಸಂಸ್ಕೃತಿ ಹಾಗೂ ಪ್ರಾಚೀನ ಭಾಷೆ ಸಂಸ್ಕೃತವನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಈ ವಿಶೇಷ ಪಂದ್ಯವನ್ನು ಆಯೋಜನೆ ಮಾಡಲಾಗಿತ್ತು. ಹೀಗಾಗಿ ಪಂದ್ಯದ ಕಾಮೆಂಟರಿಯನ್ನು ಸಂಸ್ಕೃತದಲ್ಲಿ ಮಾಡಲಾಗಿತ್ತು.