ಹೈದರಾಬಾದ್: ದೇಶದೆಲ್ಲೆಡೆ ಕೊರೊನಾ ವೈರಸ್ ಸೋಂಕಿನ ಭೀತಿ ಎದುರಾಗಿದೆ. ಮಾರ್ಚ್ 29 ರಿಂದ ಮೇ 24 ರವರೆಗೆ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟಿ-20 ಕ್ರಿಕೆಟ್ ಪಂದ್ಯಗಳನ್ನು ನಡೆಸಲು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಗೆ ಅವಕಾಶ ನೀಡದಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಮದ್ರಾಸ್ ಹೈಕೋರ್ಟ್‌ನಲ್ಲಿ ಮನವಿ ಸಲ್ಲಿಸಲಾಗಿದೆ.
ವಕೀಲ ಜಿ. ಅಲೆಕ್ಸ್ ಬೆಂಜಿಗರ್ ಸಲ್ಲಿಸಿದ ಪಿಐಎಲ್ ಮಾರ್ಚ್ 12 ರಂದು ನ್ಯಾಯಮೂರ್ತಿಗಳಾದ ಎಂ.ಎಂ. ಸುಂದ್ರೇಶ್ ಮತ್ತು ಕೃಷ್ಣನ್ ರಾಮಸ್ವಾಮಿ ಅವರನ್ನೊಳಗೊಂಡ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬರಲಿದೆ.
'ವಿಶ್ವ ಆರೋಗ್ಯ ಸಂಸ್ಥೆಯ ವೆಬ್‌ಸೈಟ್‌ನ ಪ್ರಕಾರ, ಕೊರೊನಾ ಸೋಂಕು ತಡೆಗಟ್ಟಲು ಅಥವಾ ಚಿಕಿತ್ಸೆ ನೀಡಲು ಯಾವ ಔಷಧಿಯೂ ಇಲ್ಲ' ಎಂದು ಅರ್ಜಿದಾರರು ತಿಳಿಸಿದ್ದಾರೆ.
ಇತ್ತ, ಕರ್ನಾಟಕದಲ್ಲೂ ನಾಲ್ವರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿರುವುದರಿಂದ ಬೆಂಗಳೂರಿನಲ್ಲಿ ಐಪಿಎಲ್ ಪಂದ್ಯಗ್ನಳನ್ನು ನಡೆಸುವ ಬಗ್ಗೆ ಕರ್ನಾಟಕ ಸರ್ಕಾರ ಕೇಂದ್ರದ ಸಲಹೆಯನ್ನು ಕೇಳಿದೆ.
ಕರ್ನಾಟಕದಲ್ಲಿ ಐಪಿಎಲ್ ಪಂದ್ಯಗಳು ನಡೆಯಲಿವೆ ಎಂದು ನಾನು ಕೇಂದ್ರಕ್ಕೆ ಪತ್ರ ಬರೆದಿದ್ದೇನೆ ಮತ್ತು ಮಹಾರಾಷ್ಟ್ರವು ಈ ನಿಟ್ಟಿನಲ್ಲಿ ಈಗಾಗಲೇ ನಿರ್ಧಾರ ತೆಗೆದುಕೊಂಡಿದೆ. ನಾವು ಯಾವ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರದ ಮಾರ್ಗದರ್ಶನ ಕೇಳಿದ್ದೇವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಮಂಗಳವಾರ ತಿಳಿಸಿದ್ದಾರೆ.
ವೈರಸ್ ಹರಡುವುದನ್ನು ತಡೆಗಟ್ಟಲು ಐಪಿಎಲ್ ಅನ್ನು ರದ್ದುಗೊಳಿಸುವಂತೆ ಕೋರಿ ಮುಂಬೈನ ಮೆರೈನ್ ಡ್ರೈವ್ ರೆಸಿಡೆಂಟ್ಸ್ ಆ್ಯಕ್ಷನ್ ಗ್ರೂಪ್ (ಎಂಡಿಆರ್ಎಜಿ ) ಬೃಹತ್ ಮುಂಬೈ ಮಹಾನಗರ ಪಾಲಿಕೆ ಮತ್ತು ಮುಂಬೈ ಪೊಲೀಸರಿಗೆ ಶನಿವಾರ ಪತ್ರ ಬರೆದಿದೆ ಎಂದು ತಿಳಿದುಬಂದಿದೆ.
ಆದರೆ, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಈ ವಿಷಯದಲ್ಲಿ ಅಚಲವಾಗಿದ್ದು, ವೇಳಾಪಟ್ಟಿಯ ಪ್ರಕಾರ ಐಪಿಎಲ್ ನಡೆಯಲಿದೆ ಎಂದು ಹೇಳಿದ್ದಾರೆ. ವೇಗವಾಗಿ ಹರಡುವ ವೈರಸ್ ಅನ್ನು ನಿಭಾಯಿಸಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.