ಅಬುಧಾಬಿ: ಸಿಎಸ್ಕೆ ಐಪಿಎಲ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಗುಂಪು ಹಂತದಿಂದ ಹೊರಬಿದ್ದಿದೆ. ಆದರೆ ಕೊನೆಯ 3 ಪಂದ್ಯಗಳನ್ನು ಗೆಲ್ಲುವ ಮೂಲಕ ನಗುವಿನೊಂದಿಗೆ ಟೂರ್ನಿಯನ್ನು ಅಂತ್ಯಗೊಳಿಸಿದೆ. ಈ ಮೂರು ಗೆಲುವಿನಲ್ಲೂ ಪ್ರಮುಖ ಪಾತ್ರವಹಿಸಿದ ರುತುರಾಜ್ ತಮ್ಮ ಮೊದಲ ಆವೃತ್ತಿಯಲ್ಲೇ ಕೊಹ್ಲಿ, ವಿಲಿಯರ್ಸ್ರ ದಾಖಲೆಯನ್ನು ಸರಿಗಟ್ಟಿದ್ದಾರೆ.
ಟೂರ್ನಿಯಲ್ಲಿ ಸಿಎಸ್ಕೆ 14 ಪಂದ್ಯಗಲ್ಲಿ 8 ಸೋಲು ಹಾಗೂ 6 ಗೆಲುವುಗಳೊಂದಿಗೆ 12 ಅಂಕಪಡೆದು 7ನೇ ಸ್ಥಾನದೊಂದಿಗೆ ಟೂರ್ನಿಯಿಂದ ಹೊರಬಿದ್ದಿದೆ. ಆದರೆ ಸತತ ಸೋಲುಗಳಿಂದ ವೈಫಲ್ಯ ಅನುಭವಿಸಿದ್ದ ಚೆನ್ನೈ ಕೊನೆಯ 3 ಪಂದ್ಯಗಳಲ್ಲಿ ಅದ್ಭುತವಾಗಿ ತಿರುಗಿ ಬಿದ್ದು ಆರ್ಸಿಬಿ, ಕೆಕೆಆರ್ ಹಾಗೂ ಪಂಜಾಬ್ ತಂಡವನ್ನು ಮಣಿಸುವ ಮೂಲಕ ಟೂರ್ನಿಯಲ್ಲಿ ಹ್ಯಾಟ್ರಿಕ್ ಗೆಲುವುಗಳೊಂದಿಗೆ ತನ್ನ ಅಭಿಯಾನ ಮುಗಿಸಿದೆ.
ಮೂರು ಪಂದ್ಯಗಳಲ್ಲಿ ಗಮನಾರ್ಹ ಪ್ರದರ್ಶನ ತೋರಿದ 21 ವರ್ಷದ ರುತುರಾಜ್ ಗಾಯಕ್ವಾಡ್, ಕ್ರಮವಾಗಿ 65 , 72 ಹಾಗೂ 62 ರನ್ಗಳಿಸಿ ಮೂರು ಪಂದ್ಯಗಳಲ್ಲೂ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ. ಈ ಹಿಂದೆ ಆರ್ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಎಬಿ ಡಿ ವಿಲಿಯರ್ಸ್ ಮಾತ್ರ ಐಪಿಎಲ್ನಲ್ಲಿ ಸತತ 3 ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದಿದ್ದರು.
ಇದಲ್ಲದೆ ಸತತ ಮೂರು ಪಂದ್ಯಗಳಲ್ಲಿ ಮೂರು ಅರ್ಧಶತಕ ಸಿಡಿಸಿದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮೊದಲ ಬ್ಯಾಟ್ಸ್ಮನ್ ಎಂಬ ಶ್ರೇಯಕ್ಕೆ ಪಾತ್ರರಾದರು. ಅದರಲ್ಲೂ ಚೇಸಿಂಗ್ ವೇಳೆ ಮೂರು ಅರ್ಧಶತಕ ಸಿಡಿಸುವ ಮೂಲಕ ಕ್ರಿಕೆಟ್ ಪಂಡಿತರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.