ಮುಂಬೈ: ಭಾರತದ ಪರ ಮ್ಯಾಚ್ ವಿನ್ನರ್ಗಳಾಗಿ ಧೋನಿ ಹಾಗೂ ಯುವರಾಜ್ ಸಿಂಗ್ ಹಲವು ವರ್ಷಗಳ ಕಾಲ ಆಡಿದ್ದಾರೆ. ದೇಶಕ್ಕೆ ಅದೆಷ್ಟೋ ಪಂದ್ಯಗಳನ್ನು ಗೆದ್ದುಕೊಟ್ಟಿದ್ದಾರೆ. ಆದರೆ ಇವರಿಬ್ಬರಲ್ಲಿ ಯಾರು ಉತ್ತಮ ಎಂಬ ಪ್ರಶ್ನೆಗೆ ವೇಗಿ ಬುಮ್ರಾ ಕೊಟ್ಟ ಉತ್ತರ ಅದ್ಭುತವಾಗಿದೆ.
ಯುವರಾಜ್ ಸಿಂಗ್ರೊಡನೆ ನಡೆದ ಇನ್ಸ್ಟಾಗ್ರಾಮ್ ಲೈವ್ ವೇಳೆ ಧೋನಿ ಮತ್ತು ನಾನು, ಇಬ್ಬರಲ್ಲಿ ಯಾರು ಉತ್ತಮ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಎಂಬ ಯುವಿ ಪ್ರಶ್ನೆಗೆ ಉತ್ತರಿಸಿದ ಬುಮ್ರಾ, ಅಪ್ಪ-ಅಮ್ಮ ಇಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡಿ ಎಂದರೆ ಯಾರನ್ನ ಆಯ್ಕೆ ಮಾಡುವುದು.
ಧೋನಿ ಮತ್ತು ಯುವರಾಜ್ ತಂಡಕ್ಕೆ ಹಲವು ಪಂದ್ಯಗಳನ್ನು ಗೆದ್ದುಕೊಟ್ಟಿದ್ದಾರೆ. ಅವರಿಬ್ಬರ ನಡುವೆ ಒಬ್ಬರನ್ನು ಆಯ್ಕೆ ಮಾಡುವುದು ಅಪ್ಪ-ಅಮ್ಮ ಇಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡಿ ಎಂಬಂತಾಗುತ್ತದೆ. ಹಾಗಾಗಿ ನಾನು ಇಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡುವುದಿಲ್ಲ ಎಂದಿದ್ದಾರೆ.
ಇನ್ನು ಸಚಿನ್ ಹಾಗೂ ಕೊಹ್ಲಿ ಇಬ್ಬರಲ್ಲಿ ಯಾರು ಉತ್ತಮ ಬ್ಯಾಟ್ಸ್ಮನ್ ಎಂಬ ಪ್ರಶ್ನೆಗೆ ಬುಮ್ರಾ ಸಚಿನ್ ಹೆಸರನ್ನು ಸೂಚಿಸಿದ್ದಾರೆ. ಈ ಪ್ರಶ್ನೆಗೆ ಉತ್ತರಿಸುವಷ್ಟು ಅನುಭವ ನನಗಿಲ್ಲ, ಆದರೆ ಎಲ್ಲರೂ ಸಚಿನ್ ಅಭಿಮಾನಿಗಳು, ಹೀಗಾಗಿ ನಾನು ಸಚಿನ್ರ ಹೆಸರನ್ನು ಆಯ್ಕೆ ಮಾಡಿರುವುದಾಗಿ ತಿಳಿಸಿದ್ದಾರೆ.
ಹರ್ಭಜನ್ ಸಿಂಗ್ ಮತ್ತು ಅಶ್ವಿನ್ ನಡುವೆ ಉತ್ತಮ ಸ್ಪಿನ್ನರ್ ಯಾರು ಎಂಬ ಪ್ರಶ್ನೆಗೆ ಭಜ್ಜಿ ಹೆಸರನ್ನು ಬುಮ್ರಾ ಆಯ್ಕೆ ಮಾಡಿದ್ದಾರೆ. ನಾನು ಅಶ್ವಿನ್ ಜೊತೆ ಕ್ರಿಕೆಟ್ ಆಡಿದ್ದೇನೆ, ಆದರೆ ಭಜ್ಜಿ ಬೌಲಿಂಗ್ಅನ್ನು ಬಾಲ್ಯದಿಂದ ನೋಡಿಕೊಂಡು ಬಂದಿದ್ದೇನೆ ಹಾಗೂ ಅವರ ಜೊತೆ ಆಡಿದ್ದೇನೆ. ಹೀಗಾಗಿ ನಾನು ಭಜ್ಜಿಯನ್ನು ಆಯ್ಕೆ ಮಾಡಿದ್ದೇನೆ ಎಂದು ಹೇಳಿದ್ದಾರೆ.