ನವದೆಹಲಿ: ಪೂರ್ವ ಲಡಾಖ್ನ ಗಾಲ್ವಾನ್ ಪ್ರದೇಶದಲ್ಲಿ ನಡೆದ ಸಂಘರ್ಷದಲ್ಲಿ ಭಾರತದ 20 ಯೋಧರು ಹುತಾತ್ಮರಾಗಿದ್ದರು. ಚೀನಾ ಪ್ರಾಯೋಜಿತ ಸಂಘರ್ಷಕ್ಕೆ ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗ್ತಿದೆ. ಇದೀಗ ಟೀಂ ಇಂಡಿಯಾ ಕ್ರಿಕೆಟರ್ ಸುರೇಶ್ ರೈನಾ ಕೂಡ ವಾಗ್ದಾಳಿ ನಡೆಸಿದ್ದಾರೆ.
ಸಂಘರ್ಷದ ವೇಳೆ ನಮ್ಮ ಯೋಧರು ಹುತಾತ್ಮರಾಗಿರುವುದು ನಿಜಕ್ಕೂ ದುಃಖದ ಸಂಗತಿ. ಇಲ್ಲಿ ಕುಳಿತುಕೊಂಡು ಹುತಾತ್ಮ ಯೋಧರ ಬಗ್ಗೆ ಮಾತನಾಡುವುದು ಸುಲಭ. ಆದರೆ ಅವರ ಕುಟುಂಬಸ್ಥರ ಕಣ್ಣೀರೊರೆಸುವುದು ಕಷ್ಟದ ಕೆಲಸ ಎಂದು ಅವರು ಹೇಳಿದ್ದಾರೆ.
ದೇಶದ ಸೇನೆಗೆ ನನ್ನದೊಂದು ಸೆಲ್ಯೂಟ್ ಎಂದಿರುವ ರೈನಾ, ಮೊದಲು ಕೊರೊನಾ ವೈರಸ್, ಇದೀಗ ಗಡಿ ಸಮಸ್ಯೆ ನೋಡಿದರೆ ಪೂರ್ವಯೋಜನೆಯಂತೆ ಚೀನಾ ಈ ಕೃತ್ಯ ಎಸಗುತ್ತಿರುವುದು ಸ್ಪಷ್ಟವಾಗಿದೆ ಎಂದಿದ್ದಾರೆ.
ದೇಶದ ಗಡಿ ಕಾಯುವ ಯೋಧರಿಂದಾಗಿ ನಾವು ಮನೆಯಲ್ಲಿ ಸುರಕ್ಷಿತವಾಗಿದ್ದೇವೆ. ಒಂದು ವೇಳೆ ಪ್ರಧಾನಿ ಮೋದಿ ಗಡಿಯಲ್ಲಿ ಸೇವೆ ಸಲ್ಲಿಸಲು ಹೋಗಿ ಎಂದು ಹೇಳಿದ್ರೆ ಖಂಡಿತವಾಗಿ ಹೋಗುವೆ ಎಂದು ಅವರು ತಿಳಿಸಿದರು.
ಇಂಡಿಯನ್ ಪ್ರೀಮಿಯರ್ ಲೀಗ್ನ ಪ್ರಾಯೋಜಕತ್ವ ಬದಲಾವಣೆ ಮಾಡುವ ಸಲುವಾಗಿ ಮುಂದಿನ ವಾರ ಬಿಸಿಸಿಐ ಸಭೆ ಸೇರಲಿದ್ದು, ಮಹತ್ವದ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ. ಸದ್ಯ ಚೀನಾ ಮೂಲದ ಕಂಪನಿ ವಿವೋ ಪ್ರಾಯೋಜಕತ್ವದಲ್ಲಿ ಐಪಿಎಲ್ ನಡೆಯುತ್ತಿದ್ದು, 2022ರವರೆಗೆ 440 ಕೋಟಿ ರೂಗೆ ಒಪ್ಪಂದವಾಗಿತ್ತು.
ನಮ್ಮ ಕೆಲಸವೇನಿದ್ದರೂ ಕ್ರಿಕೆಟ್ ಆಡುವುದು ಹಾಗೂ ದೇಶ ಹೆಮ್ಮೆಪಡುವಂತೆ ಮಾಡುವುದು. ಬಿಸಿಸಿಐ ಹಾಗೂ ಸರ್ಕಾರ ಪ್ರಾಯೋಜಕತ್ವದ ಬಗ್ಗೆ ನಿರ್ಧರಿಸಲಿದೆ ಎಂದಿದ್ದಾರೆ. ನನ್ನ ಕುಟುಂಬಕ್ಕೂ ಸೇನೆಯ ಹಿನ್ನೆಲೆಯಿದ್ದು ಅವರ ಬದುಕು ಯಾವ ರೀತಿಯಾಗಿರುತ್ತದೆ ಅನ್ನೋದು ನನಗೆ ಅರಿವಿದೆ. ಚೀನಾ ಉತ್ಪನ್ನ ಬಳಕೆ ಮಾಡಲಿಲ್ಲವೆಂದರೆ ನಮಗೇನೂ ಆಗಲ್ಲ ಎಂದಿದ್ದಾರೆ.