ನವದೆಹಲಿ: ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ರವೀಂದ್ರ ಜಡೇಜಾಗೆ ಕನ್ಕ್ಯೂಷನ್ ಸಬ್ಸ್ಟಿಟ್ಯೂಟ್ ಆಟಗಾರನಾಗಿ ಚಹಾಲ್ ಆಡಿರುವುದು ದೊಡ್ಡ ವಿವಾದವಾಗುತ್ತಿದೆ. ಆದರೆ ಇದು ನಿಯಮಾನುಸಾರವಾಗಿದೆ ಎಂದು ಬ್ಯಾಟಿಂಗ್ ಲೆಜೆಂಡ್ ಸುನೀಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.
ಶುಕ್ರವಾರ ನಡೆದ ಮೊದಲ ಟಿ-20 ಪಂದ್ಯದ ವೇಳೆ ಕೊನೆಯ ಓವರ್‌ನಲ್ಲಿ ಬ್ಯಾಟಿಂಗ್ ಮಾಡುವ ಸಂದರ್ಭದಲ್ಲಿ ಭಾರತದ ತಂಡದ ಆಲ್‌ರೌಂಡರ್ ರವೀಂದ್ರ ಜಡೇಜಾ ಸ್ಟಾರ್ಕ್ ಬೌಲಿಂಗ್ನಲ್ಲಿ ಹೆಲ್ಮೆಟ್ಗೆ ಬಡಿಸಿಕೊಂಡಿದ್ದರು. ನಂತರ ವೈದ್ಯರ ಪರೀಕ್ಷೆಯ ನಂತರ ಜಡೇಜಾ ಫೀಲ್ಡಿಂಗ್ ಮಾಡಿರಲಿಲ್ಲ. ಇವರ ಬದಲಿಗೆ ರೆಫ್ರಿ ಅನುಮತಿ ಪಡೆದು ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಅವರನ್ನು ಜಡೇಜಾ ಅವರ ಕನ್ಕ್ಯೂಷನ್ ಸಬ್ಸ್ಟಿಟ್ಯೂಟ್ ಆಗಿ ಆಡಿದ್ದರು.
ಆದರೆ, ಜಡೇಜಾ ಬದಲಿಗೆ ಚಹಾಲ್ ಆಡುವುದು ಖಚಿತವಾಗುತ್ತಿದ್ದಂತೆ ಆಸ್ಟ್ರೇಲಿಯಾ ತಂಡದ ಕೋಚ್ ಜಸ್ಟಿನ್ ಲ್ಯಾಂಗರ್ ರೆಫ್ರಿ ನಿರ್ಧಾರಕ್ಕೆ ಗರಂ ಆಗಿದ್ದರು. ಮ್ಯಾಚ್ ರೆಫರಿ ಡೇವಿಡ್ ಬೂನ್ ಅವರೊಂದಿಗೆ ವಾಗ್ವಾದ ಕೂಡ ನಡೆಸಿದರು. ಆದರೆ ಚಹಾಲ್ ಅವರ ಆಯ್ಕೆ ನಿಯಮದ ಅನುಸಾರವಿದೆ ಎಂದು ರೆಫ್ರಿ ಚಹಾಲ್ಗೆ ಆಡಲು ಅವಕಾಶ ನೀಡಲಾಗಿತ್ತು.
ಇದನ್ನು ಓದಿ: ಜಡೇಜಾ ಅತಿ ಹೆಚ್ಚು ತಿರಸ್ಕಾರಕ್ಕೆ ಒಳಗಾಗುತ್ತಿರುವ ಆಲ್‌ರೌಂಡರ್, ಖಂಡಿತ ಹೆಚ್ಚಿನ ಗೌರವಕ್ಕೆ ಆತ ಅರ್ಹ: ಕೈಫ್
ಈ ಬಗ್ಗೆ ಮಾತನಾಡಿರುವ ಗವಾಸ್ಕರ್ " ಚಹಾಲ್ ಆಲ್ ರೌಂಡರ್ ಅಲ್ಲ ಎಂದು ನೀವು ವಾದಿಸಬಹುದು, ಆದರೆ ಯಾವುದೇ ಬೌಲರ್ ಆದರೂ ಬ್ಯಾಟಿಂಗ್ ಮಾಡಬಲ್ಲ. ಅದು 1 ರನ್ ಬಾರಿಸಲಿ ಅಥವಾ 100 ರನ್ ಗಳಿಸಿದರೂ ಅವನು ಆಲ್‌ರೌಂಡರ್ ಎಂದು ನಾನು ನಂಬುತ್ತೇನೆ. ಚಹಾಲ್ ಬದಲಿ ಆಟಗಾರನಾಗಿ ಆಡಿರುವುದು ಸರಿಯಾಗಿದೆ. ಆಸ್ಟ್ರೇಲಿಯಾದವರೇ ಆದ ಪಂದ್ಯದ ರೆಫ್ರಿ ಕೂಡ ಇದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಈ ವಿಷಯದಲ್ಲಿ ಯಾವುದೇ ವಿವಾದ ಮಾಡುವ ಅಗತ್ಯವಿಲ್ಲ ಎಂದು ನಾನು ಭಾವಿಸುತ್ತೇನೆ " ಎಂದು ತಿಳಿಸಿದ್ದಾರೆ.
ಆದರೆ, ಕ್ರಿಕೆಟ್ ಆಟ ಕಂಡಿರುವ ಶ್ರೇಷ್ಠ ಬ್ಯಾಟ್ಸ್ಮನ್ ಈ ನಿಯಮವನ್ನು ಒಪ್ಪುವುದಿಲ್ಲ ಎಂದಿದ್ದಾರೆ. " ಕನ್ಕ್ಯೂಷನ್ ಬದಲಿ ವ್ಯವಸ್ಥೆಯನ್ನು ನಾನು ಒಪ್ಪುವುದಿಲ್ಲ. ನಾನು ಹಳೆ ಕಾಲದವನಾಗಿರಸಬಹುದು. ಬೌನ್ಸರ್ಅನ್ನು ಎದುರಿಸುವುದಕ್ಕೆ ಆಗದೆ, ಹೆಲ್ಮೆಟ್ಗೆ ಹೊಡೆಸಿಕೊಂಡರೆ ನೀವು ಸಬ್ಸ್ಟಿಟ್ಯೂಟ್ ಪಡೆಯಲು ಅರ್ಹರಲ್ಲ. ಕ್ಷಮಿಸಿ ಇದು ನನ್ನ ಅಭಿಪ್ರಾಯ ಎಂದು ವೀಕ್ಷಕ ವಿವರಣೆ ವೇಳೆ ಹೇಳಿದ್ದಾರೆ.