ಕೋಲ್ಕತ್ತಾ: ಶೀಘ್ರದಲ್ಲೇ ನೂತನ ಕ್ರಿಕೆಟ್ ಅಡ್ವೈಸರಿ ಕಮಿಟಿ(ಸಲಹಾ ಸಮಿತಿ) ನೇಮಕ ಮಾಡಲಾಗುವುದು ಎಂದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ತಿಳಿಸಿದ್ದಾರೆ.
ಈ ಬಗ್ಗೆ ಇಂದು ಮಾತನಾಡಿದ ಅವರು, ಈಗಾಗಲೇ ಕ್ರಿಕೆಟ್ ಅಡ್ವೈಸರಿ ಕಮಿಟಿ ಸದಸ್ಯರ ಆಯ್ಕೆ ಕಾರ್ಯ ಅಂತಿಮ ಹಂತದಲ್ಲಿದ್ದು, ಇನ್ನೊಂದು ಸಭೆ ಮುಗಿದ ಬಳಿಕ ನೂತನ ಸದಸ್ಯರ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ಹೇಳಿದ್ದಾರೆ.
ಸದ್ಯ ಇರುವ ಎಂ.ಎಸ್.ಕೆ. ಪ್ರಸಾದ್ ನೇತ್ಯತ್ವದ ಆಯ್ಕೆ ಸಮಿತಿ ಅಧಿಕಾರ ಅವಧಿ ಮುಕ್ತಾಯವಾಗಿದ್ದು, ನೂತನ ಸದಸ್ಯರನ್ನ ನೇಮಕ ಮಾಡಬೇಕಿದೆ. ಈ ಹಿಂದೆ ಮುಂಬೈನಲ್ಲಿ ನಡೆದ ಬಿಸಿಸಿಐನ 88ನೇ ವಾರ್ಷಿಕ ಸಭೆಯಲ್ಲಿ ಮಾತನಾಡಿದ್ದ ಗಂಗೂಲಿ ಹಾಲಿ ಸಮಿತಿಯ ಐವರ ಅಧಿಕಾರ ಅವಧಿ ಮುಕ್ತಾಯವಾಗಿದೆ ಅದಷ್ಟು ಬೇಗ ನೂತನ ಸದಸ್ಯರನ್ನ ನೇಮಕ ಮಾಡೋದಾಗಿ ತಿಳಿಸಿದ್ದರು.
ಟೀಂ ಇಂಡಿಯಾಗೆ ಆಟಗಾರರನ್ನ ಆಯ್ಕೆ ಮಾಡುವ ಈ ಅಡ್ವೈಸರಿ ಕಮಿಟಿ ಅಧಿಕಾರ ಅವಧಿ ಮೂರು ವರ್ಷವಾಗಿರಲಿದೆ ಎಂದು ಗಂಗೂಲಿ ಸ್ಪಷ್ಟಪಡಿಸಿದ್ದಾರೆ. ಸದ್ಯ ಎಂ.ಎಸ್.ಕೆ. ಪ್ರಸಾದ್, ಗಗನ್ ಖೋಡಾ ಜತಿನ್ ಪರಾಂಜಪೆ, ಸರನ್ದೀಪ್ ಸಿಂಗ್ ಮತ್ತು ದೇವಾಂಗ್ ಗಾಂಧಿ ಈ ಅಡ್ವೈಸರಿ ಕಮಿಟಿ ಸದಸ್ಯರಾಗಿದ್ದಾರೆ.