ಚೆನ್ನೈ : ಇಂಗ್ಲೆಂಡ್ ವಿರುದ್ಧ 227 ರನ್ಗಳ ಸೋಲಿಗೆ ತುತ್ತಾಗಿರುವುದಕ್ಕೆ ಯಾವುದೇ ಕ್ಷಮೆಯಿಲ್ಲ ಎಂದಿರುವ ಕೊಹ್ಲಿ. ಪಂದ್ಯದಲ್ಲಿ ದೇಹ ಭಾಷೆ ಮತ್ತು ತೀವ್ರತೆ ಅಷ್ಟಾಗಿ ತಮ್ಮ ತಂಡದಿಂದ ಕಂಡು ಬರಲಿಲ್ಲ ಎಂದು ಪಂದ್ಯದ ನಂತರ ತಿಳಿಸಿದ್ದಾರೆ.
ಇಂಗ್ಲೆಂಡ್ ನೀಡಿದ 420 ರನ್ಗಳ ಗುರಿ ಬೆನ್ನತ್ತಿದ ಟೀಂ ಇಂಡಿಯಾ ಕೇವಲ 192ರನ್ಗಳಿಗೆ ಆಲೌಟ್ ಆಗುವ ಮೂಲಕ 227ರನ್ಗಳಿಂದ ಸೋಲು ಕಂಡಿತು. ನಾಯಕ ಕೊಹ್ಲಿ 72, ಶುಭಮನ್ ಗಿಲ್ 50 ರನ್ಗಳಿಸಿದ್ದು ಬಿಟ್ಟರೆ ಉಳಿದ ಬ್ಯಾಟ್ಸ್ಮನ್ಗಳಿಂದ ಉತ್ತಮ ಪ್ರದರ್ಶನ ಕಂಡು ಬರಲಿಲ್ಲ.
"ನಮ್ಮ ದೇಹ ಭಾಷೆ ಮತ್ತು ತೀವ್ರತೆಯು ಹೆಚ್ಚಿರಲಿಲ್ಲ, ಎರಡನೇ ಇನ್ನಿಂಗ್ಸ್‌ನಲ್ಲಿ ನಾವು ಬೌಲಿಂಗ್ನಲ್ಲಿ ಉತ್ತಮವಾಗಿದ್ದೆವು. ಮೊದಲ ಇನ್ನಿಂಗ್ಸ್‌ನ ದ್ವಿತೀಯಾರ್ಧದಲ್ಲಿ ಉತ್ತಮ ಬ್ಯಾಟಿಂಗ್ ನಡೆಸಿದ್ದೆವು.
ನಾವು ಈ ಪಂದ್ಯದಲ್ಲಿ ನಿರ್ವಹಿಸಿರುವ ಯೋಗ್ಯ ಕೆಲಸ ಮತ್ತು ನಮ್ಮಿಂದಾಗಿರುವ ಪ್ರಮಾದಗಳನ್ನು ಅರ್ಥಮಾಡಿಕೊಳ್ಳಬೇಕಿದೆ. ಅಲ್ಲದೇ ಇಡೀ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ನಮಗಿಂತ ಹೆಚ್ಚು ಸ್ಥಿರತೆ ಮತ್ತು ವೃತ್ತಿಪರವಾಗಿ ಆಡಿದೆ" ಎಂದು ಕೊಹ್ಲಿ ಪಂದ್ಯದ ನಂತರ ವರ್ಚುಯಲ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಇನ್ನು, ಟೀಂ ಇಂಡಿಯಾ ನಾಯಕ ಇಂಗ್ಲೆಂಡ್ ತಂಡದ ಮೇಲೆ ಒತ್ತಡ ಹೇರುವಲ್ಲಿ ಹಾಗೂ ರನ್ಗಳ ಸೋರಿಕೆಯನ್ನು ತಡೆಯುವಲ್ಲಿ ವಿಫಲರಾದೆವು ಎಂದು ಕೊಹ್ಲಿ ಭಾವಿಸಿದ್ದಾರೆ. "ಒಟ್ಟಾರೆಯಾಗಿ ಬೌಲಿಂಗ್ ಘಟಕದಲ್ಲಿ, ವೇಗದ ಬೌಲರ್‌ಗಳು ಮತ್ತು ರವಿಚಂದ್ರನ್ ಅಶ್ವಿನ್ ಮೊದಲ ಇನ್ನಿಂಗ್ಸ್‌ನಲ್ಲಿ ಉತ್ತಮವಾಗಿ ಬೌಲಿಂಗ್ ಮಾಡಿದರು. ಆದರೆ, ನಾವು ಮೊದಲ ಇನ್ನಿಂಗ್ಸ್‌ನಲ್ಲಿ ಇನ್ನು ಕೆಲವು ರನ್‌ಗಳನ್ನು ಸೇರಿಸಿ ಎದುರಾಳಿಯ ಮೇಲೆ ಒತ್ತಡ ಹೇರಬೇಕಿತ್ತು. ಇದು ನಿಧಾನಗತಿಯ ಪಿಚ್ ಆದ್ದರಿಂದ ಬೌಲರ್ಗಳಿಗೆ ನೆರವಾಗಲಿಲ್ಲ. ಮೊದಲ ಎರಡು ದಿನ ರನ್ಗಳಿಸುವುದು ಸುಲಭವಾಗಿತ್ತು ಎಂದು ಕೊಹ್ಲಿ ತಿಳಿಸಿದ್ದಾರೆ.
ಇನ್ನು, 4 ಮತ್ತು 5ನೇ ಬೌಲರ್ಗಳಾಗಿದ್ದ ನದೀಮ್ ಮತ್ತು ವಾಷಿಂಗ್ಟನ್ ಸುಂದರ್ ಅವರ ಬೌಲಿಂಗ್ ಬಗ್ಗೆಯೂ ಕೊಹ್ಲಿ ನಿರಾಸೆ ವ್ಯಕ್ತಪಡಿಸಿದರು. ಎದುರಾಳಿಗಳ ಮೇಲೆ ಒತ್ತಡವನ್ನುಂಟು ಮಾಡಲು ಬೌಲಿಂಗ್ ವಿಭಾಗದಿಂದ ಸಂಘಟಿತ ಪ್ರದರ್ಶನದ ಅಗತ್ಯವಿರುತ್ತದೆ. ನಾವು ಎರಡನೇ ಇನ್ನಿಂಗ್ಸ್ ವೇಳೆ ಬೌಲಿಂಗ್ನಲ್ಲಿ ಉತ್ತಮ ಪ್ರದರ್ಶನ ತೋರಿದೆವು. ಆದರೆ, ಈ ಪಂದ್ಯದಲ್ಲಿ ನಾವು ಸಂಪೂರ್ಣ ಬೌಲಿಂಗ್ನಲ್ಲಿ ಹಿಡಿತ ಸಾಧಿಸಲು ವಿಫಲರಾದೆವು ಎಂದು ನಿರಾಸೆ ವ್ಯಕ್ತಪಡಿಸಿದ್ದಾರೆ.
ವಾಷಿಂಗ್ಟನ್ ಸುಂದರ್ ಯಾವುದೇ ವಿಕೆಟ್ ಪಡೆಯದೇ ಮೊದಲ ಇನ್ನಿಂಗ್ಸ್‌ನಲ್ಲಿ 98 ರನ್ ಬಿಟ್ಟುಕೊಟ್ಟರೆ, ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ ಒಂದು ಓವರ್ ಬೌಲಿಂಗ್ ಮಾಡಿದ್ದರು. ನದೀಮ್ ಮೊದಲ ಇನ್ನಿಂಗ್ಸ್‌ನಲ್ಲಿ 167ಕ್ಕೆ 2 ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ 66ಕ್ಕೆ2 ವಿಕೆಟ್ ಪಡೆದಿದ್ದರು.
ನಾವು ಸದಾ ಕಲಿಯುವ ಮತ್ತು ವಿಕಸನ ಸಾಧಿಸುವ ತಂಡವಾಗಿರುವುದರಿಂದ ನಮ್ಮ ತಪ್ಪುಗಳನ್ನು ತಿದ್ದಿಕೊಂಡು ಮುಂದಿನ 3 ಪಂದ್ಯಗಳಲ್ಲಿ ತಿರುಗಿ ಬೀಳುತ್ತೇವೆ. ಇದು ನಮಗೆ ಒಲಿದಿರುವ ಕಲೆ ಎಂದು ಬೌನ್ಸ್ ಬ್ಯಾಕ್ ಆಗುವ ಸಂದೇಶವನ್ನು ಕೊಹ್ಲಿ ಸಾರಿದ್ದಾರೆ.
ಇದನ್ನು ಓದಿ:ಇಂಗ್ಲೆಂಡ್ ವಿರುದ್ಧ ಸೋಲು: ಟೆಸ್ಟ್ ಚಾಂಪಿಯನ್ಶಿಪ್ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೆ ಕುಸಿದ ಭಾರತ