ನವದೆಹಲಿ: ಇಂಗ್ಲೆಂಡ್ ವಿರುದ್ಧ ಚೆಪಾಕ್ ಮತ್ತು ಹೊಸದಾಗಿ ನಿರ್ಮಿಸಲಾದ ಮೊಟೆರಾ ಕ್ರೀಡಾಂಗಣದಲ್ಲಿ ನಡೆಯುವ ನಾಲ್ಕು ಟೆಸ್ಟ್ ಪಂದ್ಯಗಳಲ್ಲಿ ಶೇ. 50ರಷ್ಟು ಪ್ರೇಕ್ಷಕರ ಹಾಜರಾತಿಗೆ ಅವಕಾಶ ನೀಡುವ ಬಗ್ಗೆ ಬಿಸಿಸಿಐ ಗಂಭೀರ ಆಲೋಚನೆ ಮಾಡುತ್ತಿದೆ ಎಂದು ತಿಳಿದು ಬಂದಿದೆ.
ಮೊದಲ ಎರಡು ಟೆಸ್ಟ್ ಪಂದ್ಯಗಳು ಫೆಬ್ರವರಿ 5ರಿಂದ ಚೆನ್ನೈನ ಚೆಪಾಕ್ ಮೈದಾನದಲ್ಲಿ ಹಾಗೂ ಕೊನೆಯ ಎರಡು ಟೆಸ್ಟ್ ಪಂದ್ಯಗಳು ಹೊಸದಾಗಿ ನಿರ್ಮಿತವಾಗಿರುವ ಅಹಮದಾಬಾದ್ನ ಮೊಟೆರಾ ಸ್ಟೇಡಿಯಂನಲ್ಲಿ ನಡೆಯಲಿವೆ.
ಕ್ರಿಕೆಟ್ ಆಸ್ಟ್ರೇಲಿಯಾ ಬಾರ್ಡರ್ ಗವಾಸ್ಕರ್ ಸರಣಿ ವೇಳೆ ಪ್ರೇಕ್ಷಕರಿಗೆ ಅವಕಾಶ ಮಾಡಿಕೊಟ್ಟಿರುವುದರಿಂದ ಪ್ರೇರಣೆ ಪಡೆದಿರುವ ಬಿಸಿಸಿಐ, ಶೇಕಡಾ 50ರಷ್ಟು ಪ್ರೇಕ್ಷಕರಿಗೆ ಅವಕಾಶ ಮಾಡಿಕೊಡುವ ಬಗ್ಗೆ ಮಂಗಳವಾರ ನಡೆದ ಸಭೆಯಲ್ಲಿ ಚರ್ಚಿಸಿದೆ ಎಂದು ತಿಳಿದು ಬಂದಿದೆ.
"ಪ್ರಸ್ತುತ ನಾವು 4 ಟೆಸ್ಟ್ ಪಂದ್ಯಗಳಿಗೆ ಶೇ. 50ರಷ್ಟು ಪ್ರೇಕ್ಷಕರಿಗೆ ಅವಕಾಶ ಮಾಡಿಕೊಡಬೇಕೆಂಬ ಆಲೋಚನೆ ಹೊಂದಿದ್ದೇವೆ. ಬಿಸಿಸಿಐ ಟೆಸ್ಟ್ ಪಂದ್ಯಗಳನ್ನು ಆಯೋಜನೆ ಮಾಡುವ ಎರಡು ರಾಜ್ಯ ಕ್ರಿಕೆಟ್ ಸಂಸ್ಥೆಗಳ(ಟಿಎನ್ಸಿ ಮತ್ತು ಜಿಸಿಎ) ಜೊತೆ ಮತ್ತು ರಾಜ್ಯದ ಆರೋಗ್ಯ ಇಲಾಖೆಯ ಜೊತೆ ಮಾತನಾಡಲಿದೆ" ಎಂದು ಬಿಸಿಸಿಐ ಮೂಲಗಳು ಮಾಹಿತಿ ನೀಡಿವೆ.
ಆದರೆ ಟೆಸ್ಟ್ ಪಂದ್ಯ ನಡೆಯುವ ವೇಳೆ ಕೋವಿಡ್-19 ಸಾಂಕ್ರಾಮಿಕ ಪ್ರಕರಣಗಳು ಚೆನ್ನೈ ಅಥವಾ ಅಹಮದಾಬಾದ್ನಲ್ಲಿ ಹೆಚ್ಚಾದರೆ ನಮ್ಮ ನಿರ್ಧಾರ ಅದಕ್ಕೆ ತಕ್ಕಂತೆ ಬದಲಾಗುತ್ತದೆ ಎಂದಿರುವ ಅವರು, ಒಂದು ವೇಳೆ ಈ ಪ್ರಯೋಗ ಯಶಸ್ವಿಯಾದರೆ ಮುಂದಿನ ಐಪಿಎಲ್ ವೇಳೆ ಪ್ರೇಕ್ಷಕರಿಗೆ ಅವಕಾಶ ಮಾಡಿಕೊಡುವ ಆಲೋಚನೆಯನ್ನು ಬಿಸಿಸಿಐ ಹೊಂದಿದೆ.