ನವದೆಹಲಿ: ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಮತ್ತು ಅಂತಿಮ ಟೆಸ್ಟ್ ಪಂದ್ಯಕ್ಕಾಗಿ ಬ್ರಿಸ್ಬೇನ್‌ಗೆ ಬಂದಿಳಿರುವ ಭಾರತ ಕ್ರಿಕೆಟ್ ತಂಡ ಅಲ್ಲಿ ಮೂಲಭೂತ ಸೌಲಭ್ಯಗಳ ಕೊರತೆಯಿರುವ ಹೋಟೆಲ್ ನೋಡಿ ಆಘಾತಕ್ಕೊಳಗಾಗಿದ್ದು, ಬಿಸಿಸಿಐ ಉನ್ನತ ಅಧಿಕಾರಿಗಳು ಮಧ್ಯಸ್ಥಿಕೆ ವಹಿಸಿ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿಲಾಗಿದೆ ಎಂದು ತಿಳಿದು ಬಂದಿದೆ.
ಈ ವಿಷಯ ತಿಳಿಯುತ್ತಿದ್ದಂತೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಕಾರ್ಯದರ್ಶಿ ಜಯ್ ಶಾ, ಸಿಇಒ ಹೇಮಂಗ್ ಅಮಿನ್ ಕ್ರಿಕೆಟ್ ಆಸ್ಟ್ರೆಲಿಯಾದ ಅಧಿಕಾರಿಗಳೊಡನೆ ಮಾತನಾಡಿದ್ದಾರೆ. ಈ ಮಾತುಕತೆಯ ನಂತರ ಭಾರತೀಯ ಕ್ರಿಕೆಟಿಗರು ಆರಾಮದಾಯಕವಾಗಿರುವಂತೆ ನೋಡಿಕೊಳ್ಳುವುದಾಗಿ ಸಿಎ ಭರವಸೆ ನೀಡಿದೆ ಎಂದು ತಿಳಿದು ಬಂದಿದೆ.
"ಹೋಟೆಲ್ನಲ್ಲಿ ರೂಮ್ ಸರ್ವೀಸ್ ಅಥವಾ ಹೌಸ್ ಕೀಪಿಂಗ್ ಸೌಲಭ್ಯವಿಲ್ಲ. ಜಿಮ್ ಅತ್ಯಂತ ಸಾಧಾರಣವಾಗಿದ್ದು, ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳಿಗೆ ಅದು ಸರಿಹೊಂದುವುದಿಲ್ಲ. ಸ್ವಿಮ್ಮಿಂಗ್ ಪೂಲ್ ಸೌಲಭ್ಯವಿಲ್ಲ. ಕ್ರಿಕೆಟ್ ಆಸ್ಟ್ರೇಲಿಯಾ ಈ ಮೊದಲು ಅಲ್ಲಿಗೆ ತೆರಳುವ ಮುನ್ನ ನೀಡಿದ್ದ ಭರವಸೆಯಂತೆ ಸೌಲಭ್ಯಗಳನ್ನು ಒದಗಿಸಿಲ್ಲ" ಎಂದು ಬಿಸಿಸಿಐ ಮೂಲಗಳು ಮಾಹಿತಿ ನೀಡಿವೆ.
ಆಟಗಾರರು ಮತ್ತು ಸಿಬ್ಬಂದಿ ಸೇರಲು ಅವಕಾಶ ಸಿಕ್ಕಿದಿಯಾ ಎಂದು ಕೇಳಿದ್ದಕ್ಕೆ ಉತ್ತರಿಸಿರುವ ಬಿಸಿಸಿಐ(ಮೂಲ), ಹೌದು, ಒಂದು ಟೀಮ್ ರೂಮ್ ನೀಡಿದ್ದು, ಅಲ್ಲಿ ಆಟಗಾರರೆಲ್ಲರೂ ಸೇರಲು ಅವಕಾಶ ನೀಡಿದ್ದಾರೆ. ಅಲ್ಲದೆ ಹೋಟೆಲ್ನ ಒಳಗೆ ಒಬ್ಬರನ್ನೊಬ್ಬರು ಭೇಟಿಯಾಗಲು ಕೂಡ ಅವಕಾಶ ನೀಡಲಾಗಿದೆ ಎಂದು ತಿಳಿಸಿದೆ.
ಬಾರ್ಡರ್ ಗವಾಸ್ಕರ್ ಟೂರ್ನಿಯ 3 ಪಂದ್ಯಗಳು ಮುಗಿದಿದ್ದು, ಎರಡೂ ತಂಡಗಳು ತಲಾ ಒಂದು ಪಂದ್ಯವನ್ನು ಗೆದ್ದು 1-1ರಲ್ಲಿ ಸರಣಿ ಸಮಬಲ ಸಾಧಿಸಿವೆ. ಕೊನೆಯ ಪಂದ್ಯ ಬ್ರಿಸ್ಬೇನ್ನ ಗಬ್ಬಾದಲ್ಲಿ ನಡೆಯಲಿದ್ದು, ಈ ಪಂದ್ಯ ಎರಡೂ ತಂಡಕ್ಕೂ ಸರಣಿ ಗೆಲ್ಲಲು ನಿರ್ಣಾಯಕವಾಗಿದೆ. ಪ್ರಸ್ತುತ ಟ್ರೋಫಿ ಭಾರತದ ವಶದಲ್ಲಿದೆ.
ಇದನ್ನು ಓದಿ:ಜನಾಂಗೀಯ ನಿಂದನೆ ಪ್ರಕರಣ.. ಟೀಂ ಇಂಡಿಯಾ ಮತ್ತು ಸಿರಾಜ್ ಕ್ಷಮೆ ಕೇಳಿದ ವಾರ್ನರ್..