ಮುಂಬೈ: ರಾಷ್ಟ್ರೀಯ ಉದ್ದೀಪನ ನಿಗ್ರಹ ಘಟಕ (ನಾಡಾ) ನಿಯಮಾವಳಿಗಳು ಇನ್ಮುಂದೆ ದೇಶದ ಎಲ್ಲ ಕ್ರೀಡಾಪಟುಗಳಿಗೂ ಅನ್ವಯವಾಗಲಿದ್ದು, ಇದಕ್ಕೆ ಭಾರತೀಯ ಕ್ರಿಕೆಟ್ ಮಂಡಳಿ ಕೂಡ ಸಮ್ಮತಿ ಸೂಚಿಸಿದೆ.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಬಿಸಿಸಿಐ ಸಿಇಒ ರಾಹುಲ್ ಜೋಹ್ರಿ ಜತೆ ಕೇಂದ್ರ ಕ್ರೀಡಾ ಕಾರ್ಯದರ್ಶಿ ರಾಧೇಶ್ಯಾಮ್ ಜುಲಾನಿಯಾ ಹಾಗೂ ನಾಡಾ ಡಿಜಿ ನವೀನ್ ಅಗರ್ವಾಲ್ ಸಭೆ ನಡೆಸಿ ಈ ವಿಚಾರದ ಬಗ್ಗೆ ಮಾತನಾಡಿದರು. ಈ ವೇಳೆ, ನಾಡಾ ನಿಯಮಾವಳಿ ಒಪ್ಪಿಕೊಂಡು ಅದರೊಂದಿಗೆ ಸಹಕರಿಸಲು ತಾವು ಸಿದ್ದ ಎಂದು ಬಿಸಿಸಿಐ ತಿಳಿಸಿದೆ.
ಇಷ್ಟು ದಿನ ಟೀಂ ಇಂಡಿಯಾ ಕ್ರಿಕೆಟರ್ಸ್ ನಾಡಾದಿಂದ ಡೋಪಿಂಗ್ ಪರೀಕ್ಷೆಗೆ ಒಳಗಾಗುತ್ತಿರಲಿಲ್ಲ. ಇನ್ಮುಂದೆ ನಾಡಾ ಯಾವಾಗ ಬೇಕಾದರೂ, ಎಲ್ಲಿ ಬೇಕಾದರೂ ಟೀಂ ಇಂಡಿಯಾ ಪ್ಲೇಯರ್ಸ್ ಡೋಪಿಂಗ್ ಪರೀಕ್ಷೆ ನಡೆಸಬಹುದಾಗಿದೆ. ಇದರ ಜತೆಗೆ ಭಾರತೀಯ ಕ್ರಿಕೆಟ್ಗೆ ಏನೆಲ್ಲ ಸೌಲಭ್ಯ ಬೇಕೊ ಅದೆಲ್ಲವನ್ನೂ ನೀಡಲು ನಾವು ಸಿದ್ಧವಿದ್ದೇವೆ. ಆದರೆ, ಇದಕ್ಕೆ ಒಂದಿಷ್ಟು ಶುಲ್ಕ ನೀಡಬೇಕಾಗುತ್ತದೆ ಎಂದು ನಾಡಾ ತಿಳಿಸಿದೆ.