ಮುಂಬೈ : ಭಾರತದಾದ್ಯಂತ ಕಳೆದ 18 ದಿನಗಳಿಂದ ಲಾಕ್ಡೌನ್ ಘೋಷಿಸಿದ ಮೇಲೆ ಎಲ್ಲಾ ಕಾರ್ಯಚಟುವಟಿಕೆಗಳು ನಿಂತಿವೆ. ಈ ಸಂದರ್ಭದಲ್ಲಿ ಬಿಸಿಸಿಐ ಕ್ರಿಕೆಟಿಗರಿಗೆ ಯಾವುದೇ ರೀತಿಯ ಹಣಕಾಸಿನ ತೊಂದರೆಯಾಗಬಾರೆದೆಂದು ಮೊದಲ ತ್ರೈಮಾಸಿಕ ಕಂತಿನ ಹಣವನ್ನು ನೀಡಿದೆ.
ಇಂಗ್ಲೆಂಡ್, ಆಸ್ಟ್ರೇಲಿಯಾ ದೇಶಗಳಲ್ಲಿ ಆಟಗಾರರ ವೇತನದಲ್ಲಿ ಕಡಿತ ಮಾಡಲಾಗಿದೆ. ಆದರೆ, ಕ್ರಿಕೆಟ್ನ ಶ್ರೀಮಂತ ಸಂಸ್ಥೆಯಾಗಿರುವ ಬಿಸಿಸಿಐ ಆಟಗಾರರ ವೇತನದಲ್ಲಿ ಯಾವುದೇ ಕಡಿತ ಮಾಡಲಾಗುವುದಿಲ್ಲ ಎಂದು ತಿಳಿಸಿತ್ತು. ಇದೀಗ ಮಾರ್ಚ್ ಅಂತ್ಯಕ್ಕೆ ಮುಕ್ತಾಯವಾಗುವಂತೆ ವರ್ಷದ ಲೆಕ್ಕಾಚಾರದಲ್ಲಿ ಸೇರ್ಪಡೆಯಾಗುವಂತೆ ವೇತನ ನೀಡಲಾಗಿದೆ ಎಂದು ಬಿಸಿಸಿಐ ಅಧಿಕಾರಿ ತಿಳಿಸಿದ್ದಾರೆ.
ಐಪಿಎಲ್ ಕುರಿತು ಪ್ರತಿಕ್ರಿಯಿಸಿದ ಅಧಿಕಾರಿಯೊಬ್ಬರು, ಸೆಪ್ಟೆಂಬರ್ನಲ್ಲಿ ಟಿ20 ವಿಶ್ವಕಪ್ ಹಾಗೂ ಏಷ್ಯಾಕಪ್ ವೇಳಾಪಟ್ಟಿಯಲ್ಲಿ ಸೇರಿದೆ. ಆದರೆ, ಕೊರೊನಾ ಜಾಗತಿಕ ಮಟ್ಟದಲ್ಲಿ ಹೆಚ್ಚಾಗಿರುವುದರಿಂದ ಆ ಟೂರ್ನಿಗಳು ನಡೆಯುವುದು ಅನುಮಾನ ಎನ್ನಾಲಾಗಿದೆ. ಆದರೆ, ವಿಶ್ವಕಪ್ ನಿಷೇಧಿಸಲು ಇನ್ನೂ ಐಸಿಸಿ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಐಸಿಸಿ ನಿರ್ಧಾರ ಬರುವವರೆಗೂ ಐಪಿಎಲ್ ಆಯೋಜನೆ ಕುರಿತು ಯಾವುದೇ ನಿರ್ಣಯಕ್ಕೆ ಬರುವುದಕ್ಕೆ ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ಕೊರೊನಾ ದೇಶವ್ಯಾಪಿ ಹೆಚ್ಚಾಗುತ್ತಿರುವುದರಿಂದ ಈಗಾಗಲೇ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಸಚಿನ್ ತೆಂಡೂಲ್ಕರ್, ಗಂಗೂಲಿ, ಪಠಾಣ್ ಬ್ರದರ್ಸ್, ಗಂಭೀರ್, ಪೂಜಾರ, ರಹಾನೆ ಸೇರಿದಂತೆ ಹಲವಾರು ಕ್ರಿಕೆಟಿಗರು ತಮ್ಮ ಕೈಲಾದ ಸಹಾಯ ಮಾಡಿ ಮಾನವೀಯತೆ ಮೆರೆದಿದ್ದರು. ಇದೀಗ ಬಿಸಿಸಿಐ ಆಟಗಾರರಿಗೆ ವೇತನ ನೀಡಿ ನೆರವು ನೀಡಿದೆ.