ಡಾಕಾ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಬೇಡಿಕೆಯಿಟ್ಟು ಕಳೆದ ವಾರ ಬಾಂಗ್ಲಾದೇಶ ಕ್ರಿಕೆಟಿಗರು ನಡೆಸಿದ್ದ ಪ್ರತಿಭಟನೆಗೆ ಬಿಸಿಬಿ ಸ್ಪಂದಿಸಿದ್ದು ಪ್ರಥಮ ದರ್ಜೆ ಕ್ರಿಕೆಟ್ ವೇತನವನ್ನು ದ್ವಿಗುಣಗೊಳಿಸಿದೆ.
ಡೊಮೆಸ್ಟಿಕ್ ಲೀಗ್ನಲ್ಲಿ ಪಾಲ್ಗೊಳ್ಳುವ ಆಟಗಾರರಿಗೆ ಪಂದ್ಯವೊಂದಕ್ಕೆ ಈ ಮೊದಲು 35000 ಟಾಕ(29 ಸಾವಿರ ರೂ) ನೀಡಲಾಗುತ್ತಿತ್ತು. ಪ್ರತಿಭಟನೆಯ ನಂತರ 4 ದಿನಗಳ ಪ್ರಥಮ ದರ್ಜೆ ಪಂದ್ಯಕ್ಕೆ 60,000 ಟಾಕ(50 ಸಾವಿರ) ಕ್ಕೆ ಏರಿಸಿ ಬಿಸಿಬಿ ಆದೇಶ ಹೊರಡಿಸಿದೆ.
ಎಲ್ಲಾ ರೀತಿಯ ಕ್ರಿಕೆಟ್ ನಿಲ್ಲಿಸಿ ಮೂರು ದಿನಗಳ ಪ್ರತಿಭಟನೆ ನಡೆಸಿದ ಬೆನ್ನಲ್ಲೇ ಬಿಸಿಬಿ ಕ್ರಿಕೆಟಿಗರ ಬೇಡಿಕೆಗಳಿಗೆ ಮಣಿದು ಈ ಮಹತ್ತರ ಬದಲಾವಣೆ ತಂದಿದೆ. ಸಂಬಳ ಹೆಚ್ಚಿಸುವುದರ ಜೊತೆಗೆ ಇತರೆ ವೆಚ್ಚಗಳನ್ನೂ ಏರಿಸಲಾಗಿದೆ. ಇನ್ನು ದ್ವಿತೀಯ ಹಂತದ ಸ್ಪರ್ಧೆಗಳಲ್ಲಿ ಭಾಗವಹಿಸುವ ಕ್ರಿಕೆಟಿಗರ ಸಂಬಳ 50,000 ಟಾಕಗಳಿಗೆ ಹೆಚ್ಚಳವಾಗಿದೆ.
ಮೂರು ದಿನಗಳ ಪ್ರತಿಭಟನೆ ವೇಳೆ ದೇಶಿ ಕ್ರಿಕೆಟ್ನಲ್ಲಿ ಪಾಲ್ಗೊಳ್ಳುವ ಕ್ರಿಕೆಟಿಗರಿಗೆ ವೇತನ ಹೆಚ್ಚಿಸಬೇಕೆಂದು ಶಕಿಬ್,ರಹೀಮ್, ಮಹಮ್ಮದುಲ್ಲಾ ಸೇರಿದಂತೆ ಇತರೆ ಕ್ರಿಕೆಟಿಗರು ಪ್ರತಿಭಟನೆ ನಡೆಸಿದ್ದರು. ಅವರು ಪ್ರಥಮ ದರ್ಜೆ ಪಂದ್ಯವೊಂದಕ್ಕೆ 1,00,000(87 ಸಾವಿರ) ಟಾಕಗೆ ಏರಿಸಲು ಬೇಡಿಕೆಯಿಟ್ಟಿದ್ದರು.
ಕ್ರಿಕೆಟಿಗರು ಇಟ್ಟಿದ್ದ ಬಹುಪಾಲು ಬೇಡಿಕೆಗಳನ್ನು ಈಡೇರಿಸಲು ಬಿಸಿಬಿ ಒಪ್ಪಿದ್ದು ಭಾರತ ಪ್ರವಾಸ ಕೈಗೊಳ್ಳಲು ಬಾಂಗ್ಲಾದೇಶ ಕ್ರಿಕೆಟ್ ಒಪ್ಪಿದೆ.
ಭಾರತ-ಬಾಂಗ್ಲಾದೇಶ ನಡುವೆ ನವೆಂಬರ್ 3 ರಿಂದ ಟಿ20 ಸರಣಿ, ನವೆಂಬರ್ 14 ರಿಂದ ಟೆಸ್ಟ್ ಸರಣಿ ಆರಂಭವಾಗಲಿದೆ.