ಮ್ಯಾಂಚೆಸ್ಟರ್: ಆಸ್ಟ್ರೇಲಿಯಾ ತಂಡ ತನ್ನ ಮೊದಲ ಐಸಿಸಿ ವಿಶ್ವಕಪ್ ಸೂಪರ್ ಲೀಗ್ ಸರಣಿಯಲ್ಲಿ ಇಂಗ್ಲೆಂಡ್ ವಿರುದ್ಧ 2-1ರಲ್ಲಿ ಗೆಲ್ಲುವ ಮೂಲಕ 20 ಅಂಕ ಪಡೆದಿದೆ.
ಬುಧವಾರ ಕೊನೆಗೊಂಡ ಕೊನೆಯ ಏಕದಿನ ಪಂದ್ಯದಲ್ಲಿ ಗ್ಲೆನ್ ಮ್ಯಾಕ್ಸ್ವೆಲ್ ಹಾಗೂ ಅಲೆಕ್ಸ್ ಕ್ಯಾರಿ ಅವರ ಅದ್ಭುತ ಶತಕದ ನೆರವಿನಿಂದ ದಾಖಲೆ 303 ರನ್ಗಳನ್ನು ಚೇಸ್ ಮಾಡುವ ಮೂಲಕ ಆಸ್ಟ್ರೇಲಿಯಾ ತಂಡ 2-1ರಲ್ಲಿ ಏಕದಿನ ಸರಣಿಯನ್ನು ವಶಪಡಿಸಿಕೊಂಡಿತು.
ಐಸಿಸಿ ಈ ವರ್ಷದಿಂದ ಐಸಿಸಿ ವಿಶ್ವಕಪ್ ಏಕದಿನ ಸೂಪರ್ ಲೀಗ್ ಆರಂಭಿಸಿದ್ದು, ಇದರಲ್ಲಿ ಹೆಚ್ಚು ಅಂಕ ಪಡೆದ 7 ರಾಷ್ಟ್ರಗಳು 2023ರಲ್ಲಿ ಭಾರತದಲ್ಲಿ ನಡೆಯುವ ಏಕದಿನ ವಿಶ್ವಕಪ್ಗೆ ನೇರ ಅರ್ಹತೆ ಪಡೆಯಲಿವೆ. ಇದೀಗ 5 ಬಾರಿಯ ವಿಶ್ವ ಚಾಂಪಿಯನ್ ತಮ್ಮ ಮೊದಲ ಸರಣಿಯಲ್ಲಿ ವಿಜಯ ಸಾಧಿಸಿದ್ದು, 20 ಅಂಕ ಪಡೆದಿದೆ.
ಈಗಾಗಲೇ ಐರ್ಲೆಂಡ್ ವಿರುದ್ಧ 2-1ರಲ್ಲಿ ಸರಣಿ ಗೆದ್ದಿದ್ದ ಇಂಗ್ಲೆಂಡ್ ಈ ಸರಣಿಯಲ್ಲಿ 10 ಅಂಕ ಪಡೆದು ಒಟ್ಟಾರೆ 30 ಅಂಕಗಳೊಂದಿಗೆ ಸೂಪರ್ ಲೀಗ್ನಲ್ಲಿ ಅಗ್ರಸ್ಥಾನ ಪಡೆದಿದೆ.
ಐಸಿಸಿಯ 12 ಸದಸ್ಯ ರಾಷ್ಟ್ರಗಳು ಹಾಗೂ 2015-17ರ ವಿಶ್ವ ಕ್ರಿಕೆಟ್ ಲೀಗ್ ಚಾಂಪಿಯನ್ಶಿಪ್ ಗೆದ್ದಿರುವ ನೆದರ್ಲೆಂಡ್ ಈ ಟೂರ್ನಿಯ ಭಾಗವಾಗಲಿವೆ. ಎಲ್ಲಾ ತಂಡಗಳು 4 ತವರು ಮತ್ತು 4 ವಿದೇಶಿ ಸರಣಿಗಳನ್ನು ಆಡಲಿವೆ. ಅಗ್ರ 7 ತಂಡಗಳನ್ನು ಹೊರತುಪಡಿಸಿ ಉಳಿದ ತಂಡಗಳು ಕ್ವಾಲಿಫೈಯರ್ ಮೂಲಕ ವಿಶ್ವಕಪ್ ಪ್ರವೇಶ ಮಾಡಬೇಕಾಗುತ್ತದೆ.
ಪ್ರತಿ ಪಂದ್ಯಕ್ಕೆ 10 ಅಂಕಗಳಿರುತ್ತವೆ. ಪಂದ್ಯ ರದ್ದಾದರೆ ಅಥವಾ ಟೈ ಆದರೆ ತಲಾ 5 ಅಂಕಗಳನ್ನು ಹಂಚಿಕೊಳ್ಳಲಿವೆ.