ಮೇಲ್ಬೋರ್ನ್: ಅಫ್ಘಾನಿಸ್ತಾನ ಕ್ರಿಕೆಟ್ ತಂಡ ಆಸ್ಟ್ರೇಲಿಯಾ ವಿರುದ್ಧ ತನ್ನ ಚೊಚ್ಚಲ ಟೆಸ್ಟ್ ಪಂದ್ಯವನ್ನು ವರ್ಷಾಂತ್ಯದಲ್ಲಿ ಆಡುವ ಸಾಧ್ಯತೆ ಇದೆ.
ವರದಿಗಳ ಪ್ರಕಾರ ಡಿಸೆಂಬರ್ 7 ರಿಂದ 11ರ ವರೆಗೆ ಪರ್ತ್ನಲ್ಲಿ ಪಂದ್ಯ ಆಯೋಜನೆಯಾಗಲಿದೆ ಎಂದು ತಿಳಿದುಬಂದಿದೆ. ಆದರೆ ಸಿಎನಿಂದ ಇನ್ನೂ ದಿನಾಂಕ ಖಚಿತವಾಗಿಲ್ಲ.
ಈ ಏಕೈಕ ಟೆಸ್ಟ್ ಪಂದ್ಯದ ವೇಳಾಪಟ್ಟಿಯನ್ನು ಅಂತಿಮಗೊಳಿಸುವ ಮೊದಲು ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ ಮತ್ತು ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಮಾತುಕತೆ ಮುಂದುವರಿಸಿವೆ. ಆದರೆ ಹಗಲು-ರಾತ್ರಿ ಪಂದ್ಯವಾಗಿ ಈ ಏಕೈಕ ಟೆಸ್ಟ್ ಆಯೋಜನೆಯಾಗಲಿದೆಯೇ ಎಂಬುದೇ ಪ್ರಶ್ನೆಯಾಗಿ ಉಳಿದಿದೆ.
ಐಸಿಸಿ ವೇಳಾಪಟ್ಟಿಯ ಪ್ರಕಾರ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಯು ಈ ಪಂದ್ಯವನ್ನು ನವೆಂಬರ್ನಲ್ಲಿ ಟಿ20 ವಿಶ್ವಕಪ್ ನಡೆದ ನಂತರ ಆಯೋಜಿಸಬೇಕಿತ್ತು. ಆದರೆ ಕೋವಿಡ್-19 ಬಿಕ್ಕಟ್ಟಿನಿಂದ ಹಲವು ಟೂರ್ನಿಗಳು ಮುಂದೂಡಲ್ಪಟ್ಟಿದ್ದು, ಇದೀಗ ಅವೆಲ್ಲವನ್ನು ಮತ್ತೆ ಮರುಹೊಂದಿಸಬೇಕಾಗಿದೆ.
ಈ ಪ್ರಾಸ್ತಾವಿಕ ಟೆಸ್ಟ್ ಪಂದ್ಯ ಐಸಿಸಿ ಟೆಸ್ಟ್ ಚಾಂಪಿಯನ್ಶಿಪ್ನ ಒಂದು ಭಾಗವಾಗುವುದಿಲ್ಲ. ಏಕೆಂದರೆ ಈ ಟೂರ್ನಮೆಂಟ್ ಅಗ್ರ ಒಂಬತ್ತು ತಂಡಗಳಿಗೆ ಮಾತ್ರ ಸೀಮಿತವಾಗಿದೆ. ಅಫ್ಘಾನಿಸ್ತಾನ, ಐರ್ಲೆಂಡ್ ಇದೇ ಮೊದಲ ಬಾರಿ ಸಂಪೂರ್ಣ ಸದಸ್ಯತ್ವ ಪಡೆದಿದ್ದರಿಂದ ಅವಕಾಶ ಪಡೆದಿಲ್ಲ. ಇನ್ನು ಜಿಂಬಾಬ್ವೆ ತಂಡ ಐಸಿಸಿ ನಿಷೇಧದಿಂದ ಇತ್ತೀಚೆಗೆ ಮುಕ್ತಿಗೊಂಡಿದೆ. ಹಾಗಾಗಿ ಈ ಮೂರು ತಂಡಗಳು ಟೆಸ್ಟ್ ಚಾಂಪಿಯನ್ಶಿಪ್ ಭಾಗವಾಗಿಲ್ಲ.