ಮುಂಬೈ: ಆಸ್ಟ್ರೇಲಿಯಾ ವಿರುದ್ಧದ ಕಳೆದ 2 ಪಂದ್ಯಗಳಲ್ಲಿ ಭಾರತ ತಂಡ ಕಳಪೆ ಬೌಲಿಂಗ್ ಪ್ರದರ್ಶನ ತೋರಿ ಸೋಲು ಕಂಡಿದ್ದಲ್ಲದೆ ಸರಣಿಯನ್ನು ಕಳೆದುಕೊಂಡಿದೆ. ಭಾರತದ ಸೋಲಿಗೆ ಕೊಹ್ಲಿ ತೆಗೆದುಕೊಳ್ಳುತ್ತಿರುವ ನಿರ್ಧಾರಗಳೇ ಕಾರಣ ಎಂದು ಭಾರತ ತಂಡದ ಮಾಜಿ ಬೌಲರ್ ಆಶಿಶ್ ನೆಹ್ರಾ ಕಿಡಿಕಾರಿದ್ದಾರೆ.
ಭಾನುವಾರ ನಡೆದ ಪಂದ್ಯದಲ್ಲಿ ಕೊಹ್ಲಿ ಇನ್ನು ಬೌಲಿಂಗ್ ಮಾಡುವಷ್ಟು ಸಾಮರ್ಥ್ಯ ಕಂಡುಕೊಳ್ಳದ ಹಾರ್ದಿಕ್ ಪಾಂಡ್ಯರನ್ನು ಬೌಲಿಂಗ್ಗೆ ಇಳಿಸಿದ್ದರು. ಪಾಂಡ್ಯ ಕೂಡ 4 ಓವರ್ಗಳು ಬೌಲಿಂಗ್ ಮಾಡಿದ್ದಲ್ಲದೆ ಸ್ಟಿವ್ ಸ್ಮಿತ್ರನ್ನು ಔಟ್ ಮಾಡಿದರು. ಆದರೆ ಹಿಂದಿನ ಪಂದ್ಯದಲ್ಲಿ ತಾವು ಬೌಲಿಂಗ್ ಮಾಡಲು ಇನ್ನೂ ಸಮರ್ಥರಿಲ್ಲ ಎಂದು ಹೇಳಿಕೊಂಡಿದ್ದರು. ಇನ್ನು ಬುಮ್ರಾ ಹೊಸ ಚೆಂಡಿನಲ್ಲಿ ಪರಿಣಾಮಕಾರಿ ಎಂದು ಗೊತ್ತಿದ್ದರೂ ಅವರಿಗೆ ಕೇವಲ 2 ಓವರ್ ನೀಡಿದ ನಿರ್ಧಾರವನ್ನು ಕೂಡ ನೆಹ್ರಾ ಖಂಡಿಸಿದ್ದಾರೆ.
ವಿರಾಟ್ ಕೊಹ್ಲಿ ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳುವಲ್ಲಿ ಎಡವುತ್ತಿದ್ದಾರೆ. ಮೊದಲ ಪಂದ್ಯದಲ್ಲಿನ ತಪ್ಪನ್ನು ಸರಿಪಡಿಸಿಕೊಳ್ಳದೆ ಮತ್ತದೇ ತಪ್ಪನ್ನು ಮುಂದುವರೆಸುತ್ತಿದ್ದಾರೆ. ಬುಮ್ರಾ ಹೊಸ ಚೆಂಡಿನಲ್ಲಿ ಪರಿಣಾಮಕಾರಿ ಬೌಲರ್ ಎಂದು ತಿಳಿದಿದ್ದರೂ ಅವರಿಗೆ ಕೇವಲ 2 ಓವರ್ ನೀಡಿದ್ದೇಕೆ ಎಂದು ನೆಹ್ರಾ ಪ್ರಶ್ನಿಸಿದ್ದಾರೆ.
2ನೇ ಏಕದಿನ ಪಂದ್ಯದಲ್ಲಿ ಬುಮ್ರಾ ಪವರ್ ಪ್ಲೇನಲ್ಲಿ ಕೇವಲ 2 ಓವರ್ ಮಾತ್ರ ಬೌಲಿಂಗ್ ಮಾಡಿದ್ದರು. ಅವರಿಂದ ಇನ್ನೊಂದು ಓವರ್ ಮಾಡಿಸಬಹುದಿತ್ತು ಎಂದು ಗಂಭೀರ್ ಕೂಡ ಹೇಳಿದ್ದರು.