ಮೆಲ್ಬೋರ್ನ್: ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಯು ವೇಳಾಪಟ್ಟಿ ಬದಲಾವಣೆ ವಿಚಾರದಲ್ಲಿ ಬಿಸಿಸಿಐ ಮುಂದೆ ತಲೆ ಬಾಗಬಾರದು ಎಂದು ಆಸ್ಟ್ರೇಲಿಯಾದ ಮಾಜಿ ನಾಯಕ ಅಲನ್ ಬಾರ್ಡರ್ ಹೇಳಿದ್ದಾರೆ.
ಸಾಮಾನ್ಯವಾಗಿ ಹೊಸ ವರ್ಷದ ಟೆಸ್ಟ್ ಎಂದು ಕರೆಯಲ್ಪಡುವ ಸಿಡ್ನಿ ಟೆಸ್ಟ್ ಜನವರಿ ಮೊದಲ ವಾರದಲ್ಲಿ ಪ್ರಾರಂಭವಾಗುತ್ತದೆ. ಆದರೀಗ ಪ್ರಕಟವಾಗಿರುವ ತಾತ್ಕಾಲಿಕ ವೇಳಾಪಟ್ಟಿಯಲ್ಲಿ ಜನವರಿ 7ಕ್ಕೆ ಪಂದ್ಯವನ್ನು ನಿಗದಿಪಡಿಸಲಾಗಿದೆ.
ಆಸೀಸ್ ಕ್ರಿಕೆಟ್ ಮಂಡಳಿ ಬುಧವಾರ ತಾತ್ಕಾಲಿಕ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದ್ದು, ನವೆಂಬರ್ 25 ರಿಂದ 30ರವರೆಗೆ ಬ್ರಿಸ್ಬೇನ್ನಲ್ಲಿ ಏಕದಿನ ಸರಣಿ, ಡಿಸೆಂಬರ್ 4ರಿಂದ 10ರವರೆಗೆ ಅಡಿಲೇಡ್ನಲ್ಲಿ ಟಿ-20 ಸರಣಿಯನ್ನು ಆಯೋಜನೆ ಮಾಡುವ ಇಂಗಿತ ಹೊಂದಿದೆ.
ಟೆಸ್ಟ್ ಸರಣಿಯನ್ನು ಡಿಸೆಂಬರ್ 17ರಂದು ಅಡಿಲೇಡ್ನಲ್ಲಿ ಡೇ ಆ್ಯಂಡ್ ನೈಟ್ ಮೂಲಕ ಪ್ರಾರಂಭಿಸುವ ಸಾಧ್ಯತೆಯಿದೆ. ನಂತರ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯ ಮೆಲ್ಬೋರ್ನ್ನಲ್ಲಿ ಡಿಸೆಂಬರ್ 26ರಿಂದ 30 ರವರೆಗೆ ಹಾಗೂ 3ನೇ ಟೆಸ್ಟ್ ಜನವರಿ 7-11 ಹಾಗೂ ಕೊನೆಯ ಟೆಸ್ಟ್ ಜನವರಿ 15ರಿಂದ 19ರವರೆಗೆ ನಡೆಯಲಿದೆ.
ವೇಳಾಪಟ್ಟಿ ಕುರಿತು ಮಾಧ್ಯಮವೊಂಕ್ಕೆ ಪ್ರತಿಕ್ರಿಯೆ ನೀಡಿರುವ ಆಸೀಸ್ ತಂಡದ ಮಾಜಿ ನಾಯಕ ಅಲನ್ ಬಾರ್ಡರ್, "ವೇಳಾಪಟ್ಟಿ ಒಂದು ಸಂಧಾನ ಸೂತ್ರವಾಗಿರಬೇಕು ಎಂದು ನಾನು ಭಾವಿಸುವುದಿಲ್ಲ. ವೈರಸ್ ಕಾರಣದಿಂದ ವೇಳಾಪಟ್ಟಿಯನ್ನು ಈ ರೀತಿ ಸಿದ್ಧಪಡಿಸಿದ್ದರೆ ಯಾವುದೇ ತೊಂದರೆ ಇಲ್ಲ. ಆದರೆ ಬಾಕ್ಸಿಂಗ್ ಡೇ ಟೆಸ್ಟ್ ಮತ್ತು ಹೊಸ ವರ್ಷದ ಟೆಸ್ಟ್ ಪಂದ್ಯದ ನಡುವೆ ಅವರು ಸ್ವಲ್ಪ ದಿನದ ಸಮಯ ಬಯಸಿದರೆ ಅದು ಖಂಡಿತವಾಗಿಯೂ ಒಪ್ಪುವ ವಿಚಾರವಲ್ಲ" ಎಂದಿದ್ದಾರೆ.
"ನಾವು ಇಂತಹ ಬ್ಯಾಕ್ ಟು ಬ್ಯಾಕ್ ಟೆಸ್ಟ್ ಪಂದ್ಯಗಳನ್ನು ಎಷ್ಟು ವರ್ಷಗಳಿಂದ ನಡೆಡೆಸುತ್ತಿದ್ದೇವೆ?, ಇದು ಕ್ರಿಸ್ಮಸ್-ಹೊಸ ವರ್ಷದ ಅವಧಿಯಲ್ಲಿ ರಸದೌತಣ ನೀಡುತ್ತದೆ. ಭಾರತಕ್ಕೆ ಒಂದೆರಡು ದಿನಗಳ ಬಿಡುವಿಗಾಗಿ ಪಂದ್ಯವನ್ನು ಮುಂದಕ್ಕೆ ಹಾಕಿದ್ದರೆ ನಾನು ಒಪ್ಪುವುದಿಲ್ಲ".
"ಬಿಸಿಸಿಐ ತಮ್ಮನ್ನು ವಿಶ್ವ ಕ್ರಿಕೆಟ್‌ನ ಶಕ್ತಿ ಎಂದು ಪರಿಗಣಿಸುತ್ತದೆ. ಪ್ರತೀ ವರ್ಷ ಸಾಂಪ್ರದಾಯಿಕವಾಗಿ ನಡೆಯುವ ಟೆಸ್ಟ್ ಪಂದ್ಯಗಳ ದಿನದಲ್ಲಿ ಯವುದೇ ಬದಲಾವಣೆ ಮಾಡಬಾರದು. ಸಂಧಾನ ಇರಬೇಕು, ಆದರೆ ಸಾಂಪ್ರದಾಯಿಕವಾಗಿ ನಡೆದುಕೊಂಡು ಬಂದಿರುವ ದಿನವೇ ಟೆಸ್ಟ್ ಪಂದ್ಯ ನಡೆಯಬೇಕು. ಇದರಲ್ಲಿ ಯಾವುದೇ ಸಂಧಾನ ಇರಕೂಡದು" ಅನ್ನೋದು ಬಾರ್ಡರ್ ಅಭಿಪ್ರಾಯ.