ಮುಂಬೈ: ಭಾರತ ಕ್ರಿಕೆಟಿಗ ಅಜಿತ್ ಅಗರ್ಕರ್ ಅವರು ಬಿಸಿಸಿಐ ರಾಷ್ಟ್ರೀಯ ಆಯ್ಕೆ ಸಮಿತಿ ಮುಖ್ಯಸ್ಥರ ಹುದ್ದೆಗೆ ಅರ್ಜಿ ಸಲ್ಲಿಸಿದ್ದು, ಅರ್ಜಿ ಸಲ್ಲಿಕೆ ಕುರಿತು ಮಾಧ್ಯಮಗಳಿಗೆ ಖಚಿತಪಡಿಸಿದ್ದಾರೆ.
ಮುಂಬೈ ಹಿರಿಯ ಆಯ್ಕೆ ಸಮಿತಿಯ ಮಾಜಿ ಅಧ್ಯಕ್ಷರಾಗಿರುವ ಅಗರ್ಕರ್ ಕೊನೆಗಳಿಗೆಯಲ್ಲಿಂದು ಅರ್ಜಿ ಸಲ್ಲಿಸಿದ್ದು, ಈ ಮೂಲಕ ಆಯ್ಕೆ ಸಮಿತಿ ಅಧ್ಯಕ್ಷ ಸ್ಥಾನಕ್ಕಾಗಿ ತೀವ್ರ ಪೈಪೋಟಿ ಸೃಷ್ಟಿಯಾಗಿದೆ.
ಇಂದು ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದ್ದು, ಸದ್ಯ ಅಗರ್ಕರ್ ಅರ್ಜಿ ಸಲ್ಲಿಸಿದ್ದಾರೆ. ಇನ್ನೂ ಇವರು ಏಕದಿನ ಪಂದ್ಯಗಳಲ್ಲಿ ಭಾರತದ ಮೂರನೇ ಅತಿ ಹೆಚ್ಚು ವಿಕೆಟ್ ಪಡೆದವರಾಗಿದ್ದು, 26 ಟೆಸ್ಟ್, 191 ಏಕದಿನ ಮತ್ತು 3 ಟಿ 20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಒಟ್ಟು 349 ವಿಕೆಟ್‌ಗಳನ್ನು ಪಡೆದಿದ್ದಾರೆ.
ಇದೊಂದು ಕುತೂಹಲಕಾರಿ ಬೆಳವಣಿಗೆಯಾಗಿದ್ದು, ಅರ್ಜಿ ಸಲ್ಲಿಸುವ ಮೊದಲು ಅಗರ್ಕರ್ ಸಾಕಷ್ಟು ಚಿಂತನೆ ನಡೆಸಿದ್ದಾರೆ. ಇನ್ನು ಬಿಸಿಸಿಐ ರಾಷ್ಟ್ರೀಯ ಆಯ್ಕೆ ಸಮಿತಿ ಮುಖ್ಯಸ್ಥರ ಹುದ್ದೆಗೆ ಅರ್ಜಿಗಳು ಶಾರ್ಟ್ ಲಿಸ್ಟ್ ಆಗಿದ್ದು, ಬಹಳ ಆಸಕ್ತಿಕರ ವಿಷಯವಾಗಿದೆ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ತಿಳಿಸಿದ್ದಾರೆ.
ಅಗರ್ಕರ್ ಮತ್ತು ಶಿವರಾಮಕೃಷ್ಣನ್ ಅವರಲ್ಲದೇ, ನಯನ್ ಮೊಂಗಿಯಾ, ಚೇತನ್ ಶರ್ಮಾ, ರಾಜೇಶ್ ಚೌಹಾಣ್ ಕೂಡಾ ಅರ್ಜಿ ಸಲ್ಲಿಸಿದ್ದಾರೆ.