ದುಬೈ: ಟಿ20 ಕ್ರಿಕೆಟ್ ಆರಂಭವಾದಾಗ, ಈ ಆಟ ತುಂಬಾ ವೇಗವಾಗಿದೆ. ಇದರಲ್ಲಿ ಕೇವಲ ಯುವ ಆಟಗಾರರು ಮಾತ್ರ ಆಡಬಹುದು ಎಂದು ಭಾವಿಸಲಾಗಿತ್ತು. ಆದರೆ, ಈ ಚುಟುಕು ಕ್ರಿಕೆಟ್ ವಿಕಾಸಗೊಂಡ ನಂತರ ಇತರೆ ಮಾದರಿಯ ಕ್ರಿಕೆಟ್ನಂತೆ ವಯಸ್ಸು ಕೇವಲ ಸಂಖ್ಯೆಯಷ್ಟೇ ಎಂಬುದು ಸಾಬೀತಾಗಿದೆ.
ಇದಕ್ಕೆ ಪೂರಕ ಎಂಬಂತೆ 30+ ಆಟಗಾರರನ್ನೇ ಹೆಚ್ಚು ಹೊಂದಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸತತ ಎರಡು ಬಾರಿ ಫೈನಲ್ ಪ್ರವೇಶಿಸಿತು. ಈ ಮೂಲಕ ಕ್ರಿಕೆಟ್ಗೆ ವಯಸ್ಸು ಮುಖ್ಯವಲ್ಲ ಸಾಮರ್ಥ್ಯವೇ ಪ್ರಧಾನ ಎಂದು ಕ್ರಿಕೆಟ್ ಜಗತ್ತಿಗೆ ತೋರಿಸಿಕೊಟ್ಟಿತ್ತು. ಪ್ರಸ್ತುತ ಐಪಿಎಲ್ನಲ್ಲಿ ತಂಡಗಳ ಸರಾಸರಿ ವಯಸ್ಸನ್ನು ಗಮನಿಸುವುದಾದ್ರೆ ರಾಜಸ್ಥಾನ್ ರಾಯಲ್ಸ್ ತಂಡ ಯುವಕರ ಬಳಗವಾಗಿದೆ. ಚೆನ್ನೈ ಸೂಪರ್ ಕಿಂಗ್ಸ್ ಎಂದಿನಂತೆ ಹಿರಿಯರ ತಂಡವಾಗಿಯೇ ಮುಂದುವರಿದಿದೆ.
ರಾಜಸ್ಥಾನ್ ರಾಯಲ್ಸ್: ಸರಾಸರಿ ವಯಸ್ಸು(25.84): ಉದ್ಘಾಟನಾ ಐಪಿಎಲ್ ಆವೃತ್ತಿಯ ಚಾಂಪಿಯನ್ ಆಗಿರುವ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಹೆಚ್ಚು ಯುವ ಆಟಗಾರರಿದ್ದಾರೆ. ಈ ತಂಡದ ಸರಾಸರಿ ವಯಸ್ಸು 25.84 ಆಗಿದೆ. ಕರ್ನಾಟಕದ ರಾಬಿನ್ ಉತ್ತಪ್ಪ ತಂಡದ ಅನುಭವಿ ಹಾಗೂ ಹಿರಿಯ ಕ್ರಿಕೆಟಿಗರಾಗಿದ್ರೆ, ಅಂಡರ್ 19 ವಿಶ್ವಕಪ್ನಲ್ಲಿ ಮಿಂಚಿದ್ದ ಯಶಸ್ವಿ ಜೈಸ್ವಾಲ್ ಕೂಡ ಇದೇ ತಂಡದಲ್ಲಿ ಅವಕಾಶ ಪಡೆದಿದ್ದಾರೆ.
ಮುಂಬೈ ಇಂಡಿಯನ್ಸ್(26.04) : ಐಪಿಎಲ್ನಲ್ಲಿ ನಾಲ್ಕು ಆವೃತ್ತಿಗಳಲ್ಲಿ ಪ್ರಶಸ್ತಿ ಎತ್ತಿ ಹಿಡಿದಿರುವ ಮುಂಬೈ ಇಂಡಿಯನ್ಸ್ ತಂಡ ಈ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ತಂಡದಲ್ಲಿ 21 ವರ್ಷದ ಅನುಕುಲ್ ರಾಯ್ ಅತಿ ಕಿರಿಯ ಎನಿಸಿಕೊಂಡಿದ್ದಾರೆ. ತಂಡ ಯುವ ಮತ್ತು ಅನುಭವಿ ಆಟಗಾರರ ಸಮತೋಲನ ಹೊಂದಿದೆ. ಪೊಲಾರ್ಡ್, ರೋಹಿತ್ ಹಾಗೂ ಟ್ರೆಂಟ್ ಬೌಲ್ಟ್ ಹಿರಿಯ ಸದಸ್ಯರಾಗಿದ್ದಾರೆ.
ಕಿಂಗ್ಸ್ ಇಲೆವೆನ್ ಪಂಜಾಬ್ (26.76) : ಒಮ್ಮೆಯೂ ಐಪಿಎಲ್ ಟ್ರೋಫಿ ಎತ್ತಿಹಿಡಿಯದ ಪ್ರೀತಿ ಜಿಂಟಾ ಒಡೆತನದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಸರಾಸರಿ ವಯಸ್ಸು 26.76 ಇದೆ. ಕೆ ಎಲ್ ರಾಹುಲ್ ಮುನ್ನಡೆಸುತ್ತಿರುವ ಈ ತಂಡದಲ್ಲೂ 40 ವರ್ಷದ ಕ್ರಿಸ್ಗೇಲ್ ಹಿರಿಯ ಆಟಗಾರರಾಗಿದ್ರೆ, 19 ವರ್ಷದ ರವಿ ಬಿಷ್ಣೋಯ್ ಕಿರಿಯ ಆಟಗಾಗಾರರಾಗಿದ್ದಾರೆ.
ಕೋಲ್ಕತ್ತಾ ನೈಟ್ ರೈಡರ್ಸ್ (26.81) : ಎರಡು ಬಾರಿಯ ಕೆಕೆಆರ್ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಈ ತಂಡದಲ್ಲಿ 5 ಆಟಗಾರರು ಮಾತ್ರ 30ರ ಗಟಿದಾಟಿದ್ದಾರೆ. ಕೆಕೆಆರ್ ತಂಡದ ಸರಾಸರಿ ವಯಸ್ಸು 26.81. ತಂಡದ ನಾಯಕ ದಿನೇಶ್ ಕಾರ್ತಿಕ್ ಅತ್ಯಂತ ಹಿರಿಯ ಆಟಗಾರನಾಗಿದ್ದಾರೆ. ಕಮಲೇಶ್ ನಾಗರಕೋಟಿ ತಂಡದ ಕಿರಿಯ ಆಟಗಾರ ಎನಿಸಿಕೊಂಡಿದ್ದಾರೆ.
ಡೆಲ್ಲಿಕ್ಯಾಪಿಟಲ್ (27.04) : ಶ್ರೀಮಂತ ಕ್ರಿಕೆಟ್ ಲೀಗ್ನಲ್ಲಿ ಒಮ್ಮೆಯೂ ಫೈನಲ್ ಆಡದ ಏಕೈಕ ತಂಡವಾಗಿರುವ ಡೆಲ್ಲಿ ಕ್ಯಾಪಿಟಲ್ ಈ ವರ್ಷ ಹೆಚ್ಚು ಯುವ ಆಟಗಾರರನ್ನೇ ಒಳಗೊಂಡಿದೆ. ಯುವ ಆಟಗಾರ ಶ್ರೇಯಸ್ ಅಯ್ಯರ್ ಮುನ್ನಡೆಸಲಿರುವ ತಂಡದಲ್ಲಿ 37 ವರ್ಷದ ಅಮಿತ್ ಮಿಶ್ರಾ ಹಿರಿಯ ಕ್ರಿಕೆಟಿಗನಾದ್ರೆ 20 ವರ್ಷದ ಪೃಥ್ವಿ ಶಾ ಡೆಲ್ಲಿ ತಂಡದ ಕಿರಿಯ ಆಟಗಾರನಾಗಿದ್ದಾರೆ.
ಸನ್ರೈಸರ್ಸ್ ಹೈದರಾಬಾದ್ (27.24) : 2016ರ ಐಪಿಎಲ್ ಚಾಂಪಿಯನ್ ಆಗಿರುವ ಸನ್ರೈಸರ್ಸ್ ಹೈದರಾಬಾದ್ ತಂಡದ ಆಟಗಾರರ ಸರಾಸರಿ ವಯಸ್ಸು 27.04. ಡೇವಿಡ್ ವಾರ್ನರ್ ಮುನ್ನಡೆಸುವ ತಂಡದಲ್ಲಿ ಆಫ್ಘಾನಿಸ್ತಾನದ ಮೊಹ್ಮದ್ ನಬಿ(35) ಹಾಗೂ ಡೇವಿಡ್ ವಾರ್ನರ್(33) ಹಿರಿಯರಾಗಿದ್ದಾರೆ. ಅಂಡರ್-19 ಕ್ಯಾಪ್ಟನ್ ಪ್ರಿಯಂ ಗರ್ಗ್, ಅಬ್ದುಲ್ ಸಮದ್(18) ತಂಡದ ಕಿರಿಯ ಆಟಗಾರರಾಗಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು (29.28) : ಐಪಿಎಲ್ನ ಅತಿ ಹೆಚ್ಚು ಚರ್ಚಿಸಲ್ಪಡುವ ತಂಡವಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಲಿಸ್ಟ್ನಲ್ಲಿ 7ನೇ ಸ್ಥಾನದಲ್ಲಿದೆ. ಈ ತಂಡದ ಸರಾಸರಿ ವಯಸ್ಸು 29.28 ಇದೆ. ದಕ್ಷಿಣ ಆಫ್ರಿಕಾದ ಬೌಲರ್ ಡೇಲ್ ಸ್ಟೈನ್ ತಂಡದ ಹಿರಿಯನಾದ್ರೆ, ಕರ್ನಾಟಕದ ದೇವದತ್ ಪಡಿಕ್ಕಲ್ ತಂಡದ ಕಿರಿಯ ಕ್ರಿಕೆಟಿಗನಾಗಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ (30.50) : ಹಿಂದಿನ ಎರಡು ಲೀಗ್ಗಳಂತೆ ಈ ಬಾರಿಯೂ ಚೆನ್ನೈ ಸೂಪರ್ ಕಿಂಗ್ಸ್ ಹಿರಿಯ ಆಟಗಾರರನ್ನೇ ಒಳಗೊಂಡಿದೆ. ವಯಸ್ಸಿಗಿಂತ ಅನುಭವಕ್ಕೆ ಹೆಚ್ಚು ಮಹತ್ವ ನೀಡುವ ಪ್ರಾಂಚೈಸಿಯಲ್ಲಿ ದಕ್ಷಿಣ ಆಫ್ರಿಕಾದ ಇಮ್ರಾನ್ ತಾಹೀರ್ ಅತ್ಯಂತ ಹಿರಿಯ ಎನಿಸಿಕೊಂಡಿದ್ದಾರೆ, ತಂಡದಲ್ಲಿರುವ 24 ಆಟಗಾರರಿಲ್ಲಿ 13 ಆಟಗಾರರು 30 ವಯೋಮಾನ ದಾಟಿದ್ದಾರೆ. ಇಂಗ್ಲೆಂಡ್ ಆಲ್ರೌಂಡರ್ ಸ್ಯಾಮ್ ಕರ್ರನ್ ತಂಡದ ಕಿರಿಯ ಆಟಗಾರನಾಗಿದ್ದಾರೆ.