ಮೆಲ್ಬೋರ್ನ್: ಭಾರತೀಯ ಬ್ಯಾಟ್ಸ್ಮನ್ಗಳಲ್ಲಿ ಜೊತೆಯಾಟಗಳನ್ನು ನಿರ್ಮಿಸುವ ಸಾಮರ್ಥ್ಯವಿದ್ದು, ಇನ್ನಿಂಗ್ಸ್ನಲ್ಲಿ ಲೀಡ್ ಪಡೆದು, ಉತ್ತಮ ಸ್ಥಾನದಲ್ಲಿರಲು ನೆರವಾಗಿದೆ ಎಂದು ಯುವ ಬ್ಯಾಟ್ಸ್ಮನ್ ಶುಬ್ಮನ್ ಗಿಲ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ಪಂದ್ಯ ಗೆಲ್ಲುವ ಮುನ್ನ ಪಾರ್ಟ್ನರ್ಶಿಪ್ ಬೆಳೆಸುವುದಕ್ಕೆ ಪ್ರಾಮುಖ್ಯತೆ ನೀಡಬೇಕೆಂದು ಮಾತನಾಡಿಕೊಂಡಿದ್ದೆವು ಎಂದು ಅವರು ಹೇಳಿದ್ದಾರೆ.
ರಹಾನೆ ಕೂಡ ಇದೇ ಮಾತನ್ನು ಪಂದ್ಯದ ಆರಂಭದಿಂದಲೂ ಹೇಳುತ್ತಿದ್ದರು.
"ಮೊದಲ ವಿಕೆಟ್ ಅನ್ನು ಬೇಗ ಕಳೆದುಕೊಂಡಾಗ ನಾನು ಮತ್ತು ಪೂಜಾರ ಭಾಯ್, ಈ ಜೊತೆಯಾಟವನ್ನು ಎಷ್ಟು ಸಾಧ್ಯವೋ ಅಷ್ಟು ಮುಂದಕ್ಕೆ ಕೊಂಡೊಯ್ಯಲು ಚರ್ಚಿಸಿದ್ದೆವು. ಆದರೆ ನಾನು ಆಡಿದ ಆಟ (45) ನನಗೆ ತೃಪ್ತಿದಾಯಕವೆನಿಸಲಿಲ್ಲ. ಆದರೆ ಕೊನೆಯ ಜೊತೆಯಾಟ (ರಹಾನೆ ಮತ್ತು ಜಡೇಜಾ) ಉತ್ತಮವಾಗಿ ಸಾಗಿದ್ದು, ಇದು 150 ಮತ್ತು ಅದಕ್ಕಿಂತ ಹೆಚ್ಚು ರನ್ಗಳಿಸುವ ಸಾಧ್ಯತೆಯಿದೆ" ಎಂದು ಗಿಲ್ ಹೇಳಿದ್ದಾರೆ.
ಇನ್ನು ಜಡೇಜಾ ಕೊಡುಗೆಯನ್ನು ಕೂಡ 21 ವರ್ಷದ ಆಟಗಾರ ಶ್ಲಾಘಿಸಿದ್ದಾರೆ. ನನ್ನ ಪ್ರಕಾರ, "ಅದೊಂದು ಅಮೂಲ್ಯವಾದ ಆಟ. ಅವರು 170 ಆಸುಪಾಸಿನಲ್ಲಿ 5 ವಿಕೆಟ್ ಕಳೆದುಕೊಂಡಿದ್ದ ಸಂದರ್ಭದಲ್ಲಿ ಕ್ರೀಸ್ಗಿಳಿದರು. ಆ ಸಂದರ್ಭದಲ್ಲಿ ನಾವು ವಿಕೆಟ್ ಕಳೆದುಕೊಳ್ಳುವುದು ಸುಲಭವಾದರೆ ಮತ್ತು ಎದುರಾಳಿ ಮೇಲುಗೈ ಸಾಧಿಸುವ ಕ್ಷಣವಾಗಿತ್ತು. ಆದರೆ ಜಡ್ಡು ಭಾಯ್ ಮತ್ತು ಅಜ್ಜು ಭಾಯ್ ಅವರ ಜೊತೆಯಾಟ ನಮಗೆ ಮಹತ್ವದ್ದಾಯಿತು" ಎಂದು ಗಿಲ್ ತಿಳಿಸಿದ್ದಾರೆ.
ಮೊದಲ ದಿನ 1 ವಿಕೆಟ್ ನಷ್ಟಕ್ಕೆ 31ರನ್ ಗಳಿಸಿದ್ದ ಭಾರತ ತಂಡ, 2ನೇ ದಿನ ಆರಂಭದಲ್ಲೇ 64 ರನ್ಗಳಾಗುವಷ್ಟರಲ್ಲಿ ಗಿಲ್ ಮತ್ತು ಪೂಜಾರ ವಿಕೆಟ್ ಕಳೆದುಕೊಂಡಿತು. ಆದರೆ ರಹಾನೆ (104) ಮತ್ತು ಜಡೇಜಾ (40) 6ನೇ ವಿಕೆಟ್ಗೆ 104 ರನ್ಗಳ ಜೊತೆಯಾಟ ನೀಡಿ ಆಸ್ಟ್ರೇಲಿಯಾ ವಿರುದ್ಧ 82 ರನ್ಗಳ ಮಹತ್ವದ ಮುನ್ನಡೆಗೆ ನೆರವಾದರು. ಇನ್ನು 5 ವಿಕೆಟ್ ಕೈಯಲ್ಲಿದ್ದು, ಭಾರತ ತಂಡ ಈ ಮುನ್ನಡೆಯನ್ನು ಹೆಚ್ಚಿಸಿಕೊಳ್ಳುವ ಆಲೋಚನೆಯಲ್ಲಿದೆ.