ಲಂಡನ್: ಪ್ರತಿಷ್ಠಿತ ಆ್ಯಶಸ್ ಸರಣಿ 2-2 ರಲ್ಲಿ ಮುಕ್ತಾಯಗೊಂಡಿದ್ದು ಆಸ್ಟ್ರೇಲಿಯಾದ ಓಪನರ್ ಡೇವಿಡ್ ವಾರ್ನರ್ ಸರಣಿಯಲ್ಲಿ 10 ಇನ್ನಿಂಗ್ಸ್ ಬ್ಯಾಟಿಂಗ್ ನಡೆಸಿದ್ದು 7 ಬಾರಿ ಸ್ಟುವರ್ಟ್ ಬ್ರಾಡ್ಗೆ ವಿಕೆಟ್ ಒಪ್ಪಿಸಿ ಕಳಪೆ ದಾಖಲೆಗೆ ಪಾತ್ರರಾಗಿದ್ದಾರೆ.
2019ರ ವಿಶ್ವಕಪ್ನಲ್ಲಿ 3 ಶತಕದ ಸಹಿತ 647 ರನ್ಗಳಿಸುವ ಮೂಲಕ ಟೂರ್ನಿಯಲ್ಲಿ ಕೇವಲ ಒಂದು ರನ್ನಿಂದ ಎರಡನೇ ಸ್ಥಾನ ಅಲಂಕರಿಸಿದ್ದರು. ಆದರೆ ಆ್ಯಶಸ್ ಸರಣಿಯಲ್ಲಿ ಮಾತ್ರ 5 ಟೆಸ್ಟ್ ಪಂದ್ಯಗಳಲ್ಲಿ 9.5 ರ ಸರಾಸರಿಯಲ್ಲಿ 95 ರನ್ಗಳಿಸಿದ್ದಾರೆ. ಇಡೀ ಸರಣಿಯಲ್ಲಿ ಗಳಿಸಿದ್ದು ಏಕೈಕ ಅರ್ಧಶತಕ ಮಾತ್ರ.
ಇಂಗ್ಲೆಂಡ್ನ ವೇಗಿ ಸ್ಟುವರ್ಡ್ ಬ್ರಾಡ್ ಇಡೀ ಸರಣಿಯಲ್ಲಿ ವಾರ್ನರ್ ಪಾಲಿಗೆ ಕಬ್ಬಿಣದ ಕಡಲೆಯಾದರು. ಸತತ ಮೂರು ಬಾರಿ ಡಕ್ ಔಟ್ ಸೇರಿದಂತೆ 7 ಬಾರಿ ವಾರ್ನರ್ರನ್ನು ವೇಗಿ ಬ್ರಾಡ್ ಔಟ್ ಮಾಡುವ ಮೂಲಕ ವಿಶ್ವದಾಖಲೆಗೆ ಪಾತ್ರರಾದರು.
ಟಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಕೇವಲ 5 ಬಾರಿ ಮಾತ್ರ ಒಬ್ಬ ಬ್ಯಾಟ್ಸ್ಮನ್ 7 ಬಾರಿ ಒಬ್ಬನೇ ಬೌಲರ್ಗೆ ವಿಕೆಟ್ ಒಪ್ಪಿಸಿದ್ದಾರೆ. ಕಳೆದ ಬಾರಿ ಈ ದಾಖಲೆ ಆಸ್ಟ್ರೇಲಿಯಾದ ನಥನ್ ಲಿಯಾನ್ ಮಾಡಿದ್ದರು. ಇವರು ಇಂಗ್ಲೆಂಡ್ನ ಮೊಯಿನ್ ಅಲಿಯನ್ನು 7 ಬಾರಿ ಔಟ್ ಮಾಡಿದ್ದರು.
ಇಂಗ್ಲೆಂಡ್ನ 10ನೇ ಬ್ಯಾಟ್ಸ್ಮನ್ಗಿಂತಲೂ ಕಳಪೆ ಸರಾಸರಿ
95 ರನ್ಗಳಿಸುವ ಮೂಲಕ ವಾರ್ನರ್ ಇಂಗ್ಲೆಂಡ್ನ 10ನೇ ಬ್ಯಾಟ್ಸ್ಮನ್ ಜಾಕ್ ಲೀಚ್ಗಿಂತಲೂ ಕಳಪೆ ಸರಾಸರಿ ಬ್ಯಾಟಿಂಗ್ ನಡೆಸಿದ ಬೇಡದ ದಾಖಲೆಗೆ ಪಾತ್ರರಾದರು. ಇದಲ್ಲದೆ ಇಡೀ ಸರಣಿಯಲ್ಲಿ ಎರಡು ಬಾರಿ ಮಾತ್ರ ಎರಡಂಕಿ ಮೊತ್ತ ದಾಖಲಿಸಿದ್ದಾರೆ. ವಾರ್ನರ್ 3 ಡಕ್ ಔಟ್ ಸೇರಿದಂತೆ 8 ಬಾರಿ ಒಂದಂಕಿ ಮೊತ್ತಕ್ಕೆ ಔಟಾಗಿದ್ದಾರೆ.
113 ವರ್ಷದ ಕಳಪೆ ದಾಖಲೆ ಮುರಿದ ಓಪನರ್ಸ್
ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ಆರಂಭಿಕರು ಇಡೀ ಸರಣಿಯಲ್ಲಿ 12.55 ರ ಕಳಪೆ ಸರಾಸರಿಯಲ್ಲಿ ಬ್ಯಾಟಿಂಗ್ ನಡೆಸುವ ಮೂಲಕ 113 ವರ್ಷಗಳ ಹಿಂದಿನ ಕೆಟ್ಟ ದಾಖಲೆ ಮುರಿದರು. ಈ ಹಿಂದೆ 1906 ರಲ್ಲಿ ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಸರಣಿಯಲ್ಲಿ ಆರಂಭಿಕರು 14.16 ಸರಾಸರಿಯಲ್ಲಿ ರನ್ಗಳಿಸಿ ಕಳಪೆ ದಾಖಲೆ ಬರೆದಿದ್ದರು.