ಲಾಹೋರ್ (ಪಾಕಿಸ್ತಾನ): ಕ್ರಿಕೆಟಿಗರಾದ ಮೊಹಮ್ಮದ್ ಹಫೀಜ್, ವಹಾಬ್ ರಿಯಾಜ್, ಫಖಾರ್ ಜಮಾನ್, ಮೊಹಮ್ಮದ್ ಹಸ್ನೈನ್, ಮೊಹಮ್ಮದ್ ರಿಜ್ವಾನ್, ಶದಾಬ್ ಖಾನ್ ಅವರಿಗೆ ಕಳೆದ ಮೂರು ದಿನಗಳಲ್ಲಿ ನಡೆದ ಎರಡನೇ ಕೋವಿಡ್ ಟೆಸ್ಟ್ನಲ್ಲಿ ಪಾಸಾಗಿದ್ದಾರೆ. ಇವರ ವರದಿ ನೆಗೆಟಿವ್ ಬಂದಿರುವುದರಿಂದ ಅವರು ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲು ಅರ್ಹರಾಗಿದ್ದಾರೆ ಎಂದು ಪಿಸಿಬಿ ತಿಳಿಸಿದೆ.
ಜೂನ್ 26ರಂದು ನಡೆಸಿದ ಪರೀಕ್ಷೆಯ ನೆಗೆಟಿವ್ ವರದಿ ಬಂದರೂ ಜೂನ್ 29ರಂದು ಈ 6 ಕ್ರಿಕೆಟಿಗರಿಗೆ ಮರು ಪರೀಕ್ಷೆ ನಡೆಸಲಾಗಿತ್ತು. ಇದೀಗ ಅದರಲ್ಲೂ ನೆಗೆಟಿವ್ ವರದಿ ಬಂದಿರುವುದರಿಂದ ಅವರಿಗೆ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲು ಅಗತ್ಯ ವ್ಯವಸ್ಥೆ ಮಾಡಿಕೊಳ್ಳಲು ಸೂಚಿಸಲಾಗಿದೆ ಎಂದು ಪಿಸಿಬಿ ಮಾಹಿತಿ ನೀಡಿದೆ.
20 ಆಟಗಾರರು ಹಾಗೂ ಸಿಬ್ಬಂದಿ ಸೇರಿದಂತೆ 31 ಸದಸ್ಯರ ಪಾಕಿಸ್ತಾನ ತುಕಡಿ ಭಾನುವಾರ ಇಂಗ್ಲೆಂಡ್ ತಲುಪಿದೆ. ಮುಂಬರುವ ಆಗಸ್ಟ್ ಹಾಗೂ ಸೆಪ್ಟೆಂಬರ್ನಲ್ಲಿ ಅವರು ಮೂರು ಟೆಸ್ಟ್ ಹಾಗೂ ಕೆಲವು ಟಿ-20 ಪಂದ್ಯಗಳನ್ನಾಡಲಿದ್ದಾರೆ.
ಸದ್ಯ 14 ದಿನಗಳ ಕಾಲ ಪಾಕ್ ಕ್ರಿಕೆಟ್ ತಂಡ ಕ್ವಾರಂಟೈನ್ಗೊಳಗಾಗಲಿದ್ದು, ಬಳಿಕ ತರಬೇತಿಯಲ್ಲಿ ಭಾಗಿಯಾಗಲಿದೆ ಎಂದು ಪಿಸಿಬಿ ತಿಳಿಸಿದೆ.
ಉಭಯ ತಂಡಗಳ ನಡುವಿನ ಪಂದ್ಯದ ವೇಳೆ ಯಾವುದೇ ಕ್ರೀಡಾಭಿಮಾನಿಗಳಿಗೆ ಅವಕಾಶ ಇರುವುದಿಲ್ಲ. ಅಜರ್ ಅಲಿ ಟೆಸ್ಟ್ ತಂಡವನ್ನ ಮುನ್ನಡೆಸಲಿದ್ದಾರೆ. ಟಿ-20 ತಂಡಕ್ಕೆ ಬಾಬರ್ ಅಜಂ ಸಾರಥ್ಯ ವಹಿಸಿದ್ದಾರೆ.