ಚೆನ್ನೈ : ಭಾರತ ತಂಡ ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ 317 ರನ್ಗಳ ಅಂತರದಲ್ಲಿ ಜಯ ಸಾಧಿಸುವ ಮೂಲಕ ರನ್ಗಳ ಅಂತರದಲ್ಲಿ ಬೃಹತ್ ಅಂತರದಿಂದ ಗೆದ್ದ ದಾಖಲೆಗೆ ಪಾತ್ರವಾಗಿದೆ.
ಭಾರತ ತಂಡ ಈ ಹಿಂದೆ ಇಂಗ್ಲೆಂಡ್ ವಿರುದ್ಧ 1986ರಂದು ಲೀಡ್ಸ್ನಲ್ಲಿ 279 ರನ್ಗಳ ಜಯ ಸಾಧಿಸಿದ್ದೇ ಈವರೆಗಿನ ದಾಖಲೆಯಾಗಿತ್ತು. ಇದೀಗ ಮಂಗಳವಾರ ಚೆನ್ನೈನಲ್ಲಿ 317 ರನ್ಗಳಿಂದ ಜಯ ಸಾಧಿಸುವ ಮೂಲಕ ಭಾರತ ತಂಡ ಇಂಗ್ಲೆಂಡ್ ವಿರುದ್ಧ ಹೊಸ ಮೈಲುಗಲ್ಲು ಸ್ಥಾಪಿಸಿದೆ.
ಇನ್ನು, ಭಾರತ ತಂಡದ ರನ್ಗಳ ಅಂತರದಲ್ಲಿ ಬೃಹತ್ ಜಯ ಸಾಧಿಸಿರುವ ದಾಖಲೆ ನೋಡುವುದಾದರೆ, ಇದು 5ನೇ ಗರಿಷ್ಠ ರನ್ ದಾಖಲೆಯಾಗಿದೆ. 2015-16ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 337 ರನ್ಗಳಿಂದ ಜಯ ಸಾಧಿಸಿರುವುದು ಭಾರತ ತಂಡದ ಅತಿ ಹೆಚ್ಚು ರನ್ಗಳ ಅಂತರದ ಜಯವಾಗಿದೆ.
ನಂತರ ನ್ಯೂಜಿಲ್ಯಾಂಡ್ ವಿರುದ್ಧ 2016-17ರಲ್ಲಿ 321 ರನ್ಗಳ ಜಯ, 2009ರಲ್ಲಿ ಆಸ್ಟ್ರೇಲಿಯಾ ವಿರುದ್ಧ 320 ರನ್ಗಳ ಜಯ, 2019ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 318 ರನ್ಗಳಿಂದ ಜಯ ಗಳಿಸಿರುವುದು ಭಾರತ ತಂಡದ ಅತ್ಯುತ್ತಮ ಸಾಧನೆಯಾಗಿದೆ.
ಆಸಕ್ತಿಕರ ವಿಷಯವೇನೆಂದರೆ ಭಾರತ ತಂಡದ 6 ಬೃಹತ್ ಅಂತರದಿಂದ ಜಯ ಗಳಿಸಿರುವ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ 5 ಟೆಸ್ಟ್ ಮ್ಯಾಚ್‌ಗಳು ಸೇರಿರೋದು ವಿಶೇಷ. ಆಸ್ಟ್ರೇಲಿಯಾ ವಿರುದ್ಧ ಗೆಲುವು ಮಾತ್ರ ಧೋನಿ ನಾಯಕತ್ವದಲ್ಲಿ ಬಂದಿದೆ.
ಇದನ್ನು ಓದಿ:ನಾಯಕತ್ವದಲ್ಲಿ ಧೋನಿ ದಾಖಲೆ ಸರಿಗಟ್ಟಿದ ವಿರಾಟ್ ಕೊಹ್ಲಿ..