ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ರಾಹುಲ್ ದ್ರಾವಿಡರ ಜಾಹೀರಾತೊಂದು ಕೆಲ ತಿಂಗಳ ಹಿಂದೆ ವೈರಲ್ ಆಗಿತ್ತು. ಟ್ರಾಫಿಕ್ನಲ್ಲಿ ಸಿಲುಕಿ ರೇಗಾಡುವ ರಾಹುಲ್ ಕಂಡು ನೆಟ್ಟಿಗರು ಅಕ್ಷರಶಃ ಶಾಕ್ ಆಗಿದ್ರು. ಇದೇ ಮೊದಲ ಬಾರಿಗೆ ರಾಹುಲ್ ಅಂತಹ ಜಾಹೀರಾತಲ್ಲಿ ಕಾಣಿಸಿಕೊಂಡಿದ್ದರು.
ಆದ್ರೀಗ ಭಾರತ ಮತ್ತು ಇಂಗ್ಲೆಂಡ್ ನಡುವಿನ ಕೊನೆಯ ಟೆಸ್ಟ್ ಪಂದ್ಯ ರದ್ದಾದ ಬೆನ್ನಲ್ಲೆ ಮತ್ತೆ ದ್ರಾವಿಡ್ ಜಾಹೀರಾತು ಸದ್ದು ಮಾಡಿದೆ. ಹೌದು 5ನೇ ಟೆಸ್ಟ್ ಪಂದ್ಯ ರದ್ದಾದ ಬೆನ್ನಲ್ಲೆ ಅಭಿಮಾನಿಗಳು ದ್ರಾವಿಡ್ ಅವರ ಜಾಹೀರಾತು ಹಿಡಿದು ಮೀಮ್ ಹರಿಬಿಟ್ಟಿದ್ದಾರೆ. ಪಂದ್ಯ ರದ್ದಾದ ಸುದ್ದಿ ಹೊರಬೀಳುತ್ತಿದ್ದಂತೆ ಇಂಟರ್ನೆಟ್ನಲ್ಲಿ ಮೀಮ್ಗಳ ಸುರಿಮಳೆಯಾಗಿದೆ.
ಭಾರತ ತಂಡದ ಸಹಾಯಕ ಭೌತಚಿಕಿತ್ಸಕ ಯೋಗೀಶ್ ಪರ್ಮಾರ್ಗೆ ಕೋವಿಡ್ ದೃಢವಾದ ಬಳಿಕ ಕೊನೆಯ ಟೆಸ್ಟ್ ಪಂದ್ಯ ರದ್ದು ಮಾಡಲಾಗಿತ್ತು. ಹೀಗಾಗಿ ಅಭಿಮಾನಿಗಳಿಗೆ ಒಂದೆಡೆ ನಿರಾಸೆಯಾದರೆ ಮತ್ತೊಂದೆಡೆ ತಮ್ಮ ಅಸಮಾಧಾನವನ್ನ ಮೀಮ್ಸ್ ಮೂಲಕ ತೋಡಿಕೊಂಡಿದ್ದಾರೆ.
ಸಾವಿರಾರು ಮಂದಿಯಿಂದ ಲೈಕ್
‘ನೀವು 5ನೇ ಟೆಸ್ಟ್ಗಾಗಿ ಕಾಯುತ್ತಿದ್ದೀರಿ, ಆದರೆ ಅದು ಮುಂದೂಡಲ್ಪಟ್ಟಿದೆ ಎಂದು ತಿಳಿದಾಗ’ ಎಂದು ಬರೆದು ದ್ರಾವಿಡ್ ಅವರ ಕೂಗಾಟದ ಫೋಟೊಗಳನ್ನ ಅಭಿಮಾನಿಯೊಬ್ಬರು ಹಂಚಿಕೊಂಡಿದ್ದಾರೆ. ಟ್ವಿಟರ್ನಲ್ಲಿ ಈ ಮೀಮ್ ವೈರಲ್ ಆಗಿದ್ದು, ಸಾವಿರಾರು ಮಂದಿ ಲೈಕ್ ಮಾಡಿದ್ದಾರೆ.
ಇನ್ನು ಕೊನೆಯ ಟೆಸ್ಟ್ ಮುಂದಿನ ವರ್ಷ ನಡೆಯಬಹುದು ಎನ್ನಲಾದ ಬೆನ್ನಲ್ಲೆ ಇಂಗ್ಲೆಂಡ್ ತಂಡಕ್ಕೆ ವೇಗಿ ಆರ್ಚರ್ ಹಾಗೂ ಬೆನ್ಸ್ ಸ್ಟೋಕ್ಸ್ ಸೇರಿಕೊಳ್ಳುವ ಸಾಧ್ಯತೆ ಇದೆ ಇದು ಇಂಗ್ಲೆಂಡ್ ತಂಡಕ್ಕೆ ಲಾಭವಾಗುವ ಸಾಧ್ಯತೆ ಇದ್ದು, ಬೇಕಂತಲೇ ಇಸಿಬಿ ಟೆಸ್ಟ್ ಮುಂದೂಡಲು ಸಹಮತ ಸೂಚಿಸಿದೆ ಎಂದು ಅಭಿಮಾನಿಯೊಬ್ಬರು ಬರೆದಿದ್ದಾರೆ.
ಈ ಪಂದ್ಯ ನಡೆಯಲೇಬೇಕು!
ಇದಲ್ಲದೇ ಭಾರತ ಮತ್ತು ಇಂಗ್ಲೆಂಡ್ ನಡುವೆ ಮತ್ತೆ ಟೆಸ್ಟ್ ಪಂದ್ಯ ನಡೆಯುವುದು 2024-25ಕ್ಕೆ ಎನ್ನಲಾಗಿದ್ದು, ಹೀಗಾಗಿ ಇದು ಆ್ಯಂಡರ್ಸನ್ ಹಾಗೂ ಕೊಹ್ಲಿ ಮುಖಾಮುಖಿಯ ಕೊನೆಯ ಪಂದ್ಯವಾಗಿತ್ತು. ಈ ಪಂದ್ಯ ನಡೆಯಲೇಬೇಕು ಎಂದು ಅಭಿಮಾನಿಯೊಬ್ಬರು ಮನವಿ ಮಾಡಿದ್ದಾರೆ. ಜತೆಗೆ ಭಾರತ ಹಾಗೂ ಆಂಗ್ಲರ ನಡುವಿನ 4 ಟೆಸ್ಟ್ ಪಂದ್ಯದಲ್ಲಿ ಅತ್ಯಧಿಕ ಬೌಂಡರಿಗಳ ಸಿಡಿಸಿದ್ದು ಭಾರತವಾಗಿದೆ. ಭಾರತ 245 ಬೌಂಡರಿಗಳನ್ನು ಸಿಡಿಸಿದ್ದರೆ ಇಂಗ್ಲೆಂಡ್ 233 ಬೌಂಡರಿಗಳನ್ನ ಬಾರಿಸಿದೆ. ಈ ಹಿನ್ನೆಲೆ ಭಾರತ ತಂಡವನ್ನ ವಿಜೇತ ತಂಡ ಎಂದು ಘೋಷಿಸಬೇಕು ಎಂದು ಅಭಿಮಾನಿಯೊಬ್ಬರು ಕೋರಿದ್ದಾರೆ.
ಇಂತಹ ಸಾವಿರಾರು ಮೀಮ್ಗಳು ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಒಬ್ಬೊಬ್ಬರು ಒಂದೊಂದು ರೀತಿಯ ಬೇಡಿಕೆ ಮುಂದಿಟ್ಟಿದ್ದಾರೆ. ಜೊತೆಗೆ ಎಲ್ಲಾ ಮೀಮ್ಗಳು ರಾಹುಲ್ ದ್ರಾವಿಡ್ ಫುಲ್ ಫೇಮಸ್ ಆಗಿದ್ದಾರೆ.
ಓದಿ: ಶ್ರೀಲಂಕಾ-ದ.ಆಫ್ರಿಕಾ ಟಿ-20 ಸರಣಿ: ಮೊದಲ ಪಂದ್ಯ ಗೆದ್ದ ಹರಿಣಗಳ ತಂಡ