ನವದೆಹಲಿ: ವಿಸರ್ಜನೆಗೊಂಡ ಭಾರತ ಕ್ರಿಕೆಟ್ ತಂಡದ ಆಯ್ಕೆ ಸಮಿತಿಗೆ ಹೊಸ ಸದಸ್ಯರ ನೇಮಕಕ್ಕಾಗಿ ಅರ್ಜಿ ಕರೆಯಲಾಗಿದ್ದು, ಸದಸ್ಯರ ನೇಮಕಕ್ಕಾಗಿ ರಚಿಸಲಾದ ಮಾಜಿ ಕ್ರಿಕೆಟಿಗರಾದ ಅಶೋಕ್ ಮಲ್ಹೋತ್ರಾ, ಜತಿನ್ ಪರಂಜ್ಪೆ ಮತ್ತು ಸುಲಕ್ಷಣಾ ನಾಯಕ್ ಅವರ ಕ್ರಿಕೆಟ್ ಸಲಹಾ ಸಮಿತಿಯು (ಸಿಎಸಿ) ಡಿಸೆಂಬರ್ 30 ರಂದು ಮುಂಬೈನಲ್ಲಿ ಸಭೆ ನಡೆಯಲಿದೆ. ಅಂದು ನಡೆಯುವ ಸಭೆಯಲ್ಲಿ 5 ಸದಸ್ಯರ ಪುರುಷರ ಆಯ್ಕೆ ಸಮಿತಿಗೆ ಹೊಸ ಸದಸ್ಯರನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ.
ವಿಶ್ವಕಪ್ ವೈಫಲ್ಯದ ಬಳಿಕ ನವೆಂಬರ್ 18 ರಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಚೇತನ್ ಶರ್ಮಾ ನೇತೃತ್ವದ ಆಯ್ಕೆ ಸಮಿತಿ ಬರ್ಖಾಸ್ತು ಮಾಡಿತ್ತು. ಬಳಿಕ ಹೊಸ ಸದಸ್ಯರ ನೇಮಕಕ್ಕಾಗಿ ಅರ್ಜಿ ಕರೆಯಲಾಗಿತ್ತು. ಆಯ್ಕೆ ಸಮಿತಿ ನೇಮಕಕ್ಕೆ ಡಿಸೆಂಬರ್ 1 ರಂದು ಅಶೋಕ್ ಮಲ್ಹೋತ್ರಾ, ಜತಿನ್ ಪರಂಜ್ಪೆ ಮತ್ತು ಸುಲಕ್ಷಣಾ ನಾಯಕ್ ಅವರಿದ್ದ ಸಿಎಸಿಯನ್ನು ರಚಿಸಲಾಗಿದೆ.
ಅರ್ಹತೆಗಳೇನು: ಭಾರತ ಪುರುಷರ ಕ್ರಿಕೆಟ್ ತಂಡದ ಆಯ್ಕೆ ಸಮಿತಿಗೆ ನೇಮಕವಾಗಲು ಅಭ್ಯರ್ಥಿಗಳು ಬಿಸಿಸಿಐ ನಿಗದಿಪಡಿಸಿದ ಮಾನದಂಡದ ಪ್ರಕಾರ, ಕನಿಷ್ಠ 7 ಟೆಸ್ಟ್, 30 ಪ್ರಥಮ ದರ್ಜೆ, ಅಥವಾ 10 ಏಕದಿನ ಪಂದ್ಯಗಳನ್ನು ಆಡಿರಬೇಕು. ಕನಿಷ್ಠ ಐದು ವರ್ಷಗಳ ಹಿಂದೆಯೇ ಕ್ರಿಕೆಟ್ನಿಂದ ನಿವೃತ್ತರಾಗಿರಬೇಕೆಂಬ ಷರತ್ತು ಇದೆ. ಅರ್ಜಿ ಸಲ್ಲಿಸಲು ನ.28ಕ್ಕೆ ಕೊನೆಯ ದಿನವಾಗಿತ್ತು. 60ಕ್ಕೂ ಅಧಿಕ ಅಭ್ಯರ್ಥಿಗಳಿಂದ ಅರ್ಜಿ ಬಂದಿದೆ.
ಓದಿ: ಟೆಸ್ಟ್ನಲ್ಲಿ 350 ವಿಕೆಟ್ ಕಿತ್ತ ಟಿಮ್ ಸೌಥಿ.. ನ್ಯೂಜಿಲೆಂಡ್ನ ಮೂರನೇ ಆಟಗಾರ ದಾಖಲೆ