ದುಬೈ: ವೆಸ್ಟ್ ಇಂಡೀಸ್ ಲೆಜೆಂಡರಿ ಬ್ಯಾಟರ್ ಕ್ರಿಸ್ ಗೇಲ್ ಯುಎಇಯಲ್ಲಿ ಬಯೋಬಬಲ್ ಬಿಡಲು ಕಾರಣ ಅವರನ್ನು ಪಂಜಾಬ್ ಕಿಂಗ್ಸ್ ತಂಡ ಸರಿಯಾಗಿ ನಡೆಸಿಕೊಂಡಿಲ್ಲ. ಹಾಗಾಗಿ ಅವರು ಟಿ20 ವಿಶ್ವಕಪ್ಗೂ ಮುನ್ನ ತಮ್ಮ ಮನಸ್ಸನ್ನು ಹಗುರ ಮಾಡಿಕೊಳ್ಳಲು ಹೊರ ಹೋಗಿದ್ದಾರೆ ಎಂದು ಇಂಗ್ಲೆಂಡ್ ಮಾಜಿ ನಾಯಕ ಹಾಗೂ ಕಾಮೆಂಟೇಟರ್ ಕೆವಿನ್ ಪೀಟರ್ಸನ್ ಅಭಿಪ್ರಾಯಪಟ್ಟಿದ್ದಾರೆ.
ಕೆರಿಬಿಯನ್ ಬ್ಯಾಟ್ಸ್ಮನ್ ಗೇಲ್ ಬಯೋಬಬಲ್ ಆಯಾಸದಿಂದಾಗಿ ಪಂಜಾಬ್ ಕಿಂಗ್ಸ್ ಹೋಟೆಲ್ ಮತ್ತು ಐಪಿಎಲ್ ಬಯೋಬಬಲ್ ಅನ್ನು ತೊರೆದಿದ್ದಾರೆ. ಅವರು ಈ ಪರಿಸ್ಥಿತಿಯಲ್ಲಿ ಕಳೆದು ಕೆಲವು ತಿಂಗಳಿನಿಂದ ಫ್ರಾಂಚೈಸಿ ಮತ್ತು ಅಂತಾರಾಷ್ಟ್ರೀಯ ಲೀಗ್ಗಳಲ್ಲಿ ಆಡಿ ದಣಿದಿದ್ದಾರೆ. ಹಾಗಾಗಿ ಅವರು ಪಂಜಾಬ್ ತಂಡದ ಉಳಿದ ಪಂದ್ಯಗಳಿಗೆ ಲಭ್ಯರಿರುವುದಿಲ್ಲ ಎಂದು ಸೆಪ್ಟೆಂಬರ್ 30ರಂದು ಫ್ರಾಂಚೈಸಿ ಹೇಳಿಕೆ ಬಿಡುಗಡೆ ಮಾಡಿತ್ತು.
ಶುಕ್ರವಾರ ಈ ಕುರಿತು ಸ್ಟಾರ್ಸ್ಪೋರ್ಟ್ಸ್ನಲ್ಲಿ ಮಾತನಾಡಿದ ಪೀಟರ್ಸನ್," ಗೇಲ್ರನ್ನು ಅವರಿದ್ದ ಪರಿಸರದಲ್ಲಿ ಸರಿಯಾಗಿ ನೋಡಿಕೊಂಡಿಲ್ಲ. ತಮ್ಮನ್ನು ಉಪಯೋಗಿಸಿಕೊಳ್ಳಲಾಗುತ್ತಿದೆ ಎಂಬ ಭಾವನೆ ಅವರಲ್ಲಿ ಉಂಟಾಗಿದೆ. ಅವರ ಜನ್ಮದಿನದಂದು ಪಂದ್ಯದಲ್ಲಿ ಆಡುವ ಅವಕಾಶ ನೀಡದೇ ಕಡೆಗಣಿಸಲಾಯಿತು. ಆತನಿಗೆ 42 ವರ್ಷ, ಆತ ಸಂತೋಷದಲ್ಲಿಲ್ಲ ಎಂದರೆ, ತನಗೇನು ಮಾಡಬೇಕೆಂದು ತೋಚುತ್ತದೆಯೋ ಅದನ್ನು ಮಾಡಲು ಬಿಡಬೇಕು" ಎಂದು ಹೇಳಿದ್ದಾರೆ.
ಕ್ರಿಸ್ ಗೇಲ್ ಈ ವರ್ಷದ ಐಪಿಎಲ್ನಲ್ಲಿ ಪಂಜಾಬ್ ಕಿಂಗ್ಸ್ ಪರ 10 ಪಂದ್ಯಗಳನ್ನಾಡಿ 193 ರನ್ ಗಳಿಸಿದ್ದಾರೆ. ಅವರ ಗರಿಷ್ಠ ಸ್ಕೋರ್ 46 ಆಗಿದೆ.
ಭಾರತದ ಸುನೀಲ್ ಗವಾಸ್ಕರ್ ಕೂಡ 12 ಪಂದ್ಯಗಳಲ್ಲಿ 10 ಅಂಕಗಳೊಂದಿಗೆ 5ನೇ ಸ್ಥಾನದಲ್ಲಿರುವ ಪಂಜಾಬ್ ಕಿಂಗ್ಸ್ ತನ್ನ ಮುಂದಿನ ಪಂದ್ಯಗಳಲ್ಲಿ ಕ್ರಿಸ್ ಗೇಲ್ರನ್ನು ಖಂಡಿತ ಮಿಸ್ ಮಾಡಿಕೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.
"ಕ್ರಿಸ್ ಗೇಲ್ರಂತಹ ಗೇಮ್ ಚೇಂಜರ್ ತಂಡದಲ್ಲಿಲ್ಲ ಎಂದರೆ ಖಂಡಿತ ಆ ತಂಡಕ್ಕೆ ದೊಡ್ಡ ನಷ್ಟವಾಗಲಿದೆ. ಆತ ಲಭ್ಯನಿದ್ದು ತಂಡದಿಂದ ಹೊರಗುಳಿದಿದ್ದಾರೆ ಎಂದರೆ, ಅವರ ಲೆಕ್ಕಾಚಾರವೇನು ಎನ್ನುವುದು ನನಗೆ ಅರ್ಥವಾಗುತ್ತಿಲ್ಲ. ತಂಡದಲ್ಲಿ 4 ವಿದೇಶಿ ಆಟಗಾರರು ಆಡಬೇಕೆಂಬುದು ಸ್ಪಷ್ಟವಾಗಿದೆ. ಆದರೆ ಗೇಲ್ ಸ್ಥಾನದಲ್ಲಿ ಆಯ್ಕೆ ಮಾಡಿದ ಆಟಗಾರರನ್ನು ನೋಡಿದಾಗ, ಆ ಆಟಗಾರ ಸಾಮರ್ಥ್ಯವೇನು ಎನ್ನುವುದು ಗೊತ್ತಿರಬೇಕು. ಗೇಲ್ಗೆ 40 ವರ್ಷವಾಗಿರುವುದರಿಂದ ಸ್ಥಿರ ಪ್ರದರ್ಶನ ತೋರುವುದು ಈ ವಯಸ್ಸಿನಲ್ಲಿ ಕಷ್ಟವಾಗಬಹುದು. ಆದರೆ ಆತ ಗೇಮ್ ಚೇಂಜರ್, ಕೇವಲ 3 ಓವರ್ಗಳಲ್ಲಿ ಆತ ಬ್ಯಾಟಿಂಗ್ ಮಾಡಿದರೆ ಎದುರಾಳಿ ಕೈಯಿಂದ ಗೆಲುವು ದೂರವಾಗುತ್ತದೆ" ಎಂದು ಹೇಳಿದ್ದಾರೆ.
ಇದನ್ನು ಓದಿ:ICC T20 ವಿಶ್ವಕಪ್ : ಶ್ರೀಲಂಕಾ ತಂಡಕ್ಕೆ ಹೆಚ್ಚುವರಿಯಾಗಿ ಐವರು ಪ್ಲೇಯರ್ಸ್ ಸೇರ್ಪಡೆ