ನವದೆಹಲಿ : ಭಾರತ ಕ್ರಿಕೆಟ್ ಇತಿಹಾಸ ಕಂಡ ಶ್ರೇಷ್ಠ ವೇಗಿಗಳಲ್ಲಿ ಒಬ್ಬರಾಗಿರುವ ಜಸ್ಪ್ರೀತ್ ಬುಮ್ರಾ ಅವರನ್ನು ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಘೋಷಿಸಿರುವ ತಂಡದಲ್ಲಿ ಉಪನಾಯಕನನ್ನಾಗಿ ನೇಮಿಸಲಾಗಿದೆ. ಈ ನಿರ್ಧಾರ ಅಚ್ಚರಿ ತಂದರೂ ಭಾರತ ಕ್ರಿಕೆಟ್ ಯಶಸ್ಸಿಗೆ ಬುಮ್ರಾ ನೀಡಿರುವ ಕೊಡುಗೆ ಗಮನಿಸಿದರೆ ಆಯ್ಕೆ ಸಮಿತಿಯ ಈ ನಿರ್ಧಾರ ಸೂಕ್ತವಾಗಿದೆ.
ಈ ನಿರ್ಧಾರ ಮಾಡುವಾಗ ಚೇತನ್ ಶರ್ಮಾ ನೇತೃತ್ವದ ಆಯ್ಕೆ ಸಮಿತಿಯು ಪ್ಯಾಟ್ ಕಮ್ಮಿನ್ಸ್ ಅವರನ್ನ ಆಸ್ಟ್ರೇಲಿಯಾ ತಂಡದ ಟೆಸ್ಟ್ ನಾಯಕನಾಗಿ ನೇಮಿಸಿರುವುದರಿಂದ ಸ್ಫೂರ್ತಿ ಪಡೆದಿದೆ ಅಂದರೆ ಆಶ್ಚರ್ಯವೇನಿಲ್ಲ.
ಆದರೆ, ಈ ಆಯ್ಕೆಯನ್ನು ಮಾಡುವಾಗ ಇಬ್ಬರು ಐಪಿಎಲ್ ನಾಯಕರಾದ ಶ್ರೇಯಸ್ ಅಯ್ಯರ್ ಮತ್ತು ರಿಷಬ್ ಪಂತ್ ಅವರನ್ನು ಮೀರಿ ಬುಮ್ರಾರನ್ನು ಆಯ್ಕೆ ಮಾಡಿರುವುದು ಬಹಳ ಆಸಕ್ತಿದಾಯಕವಾಗಿದೆ.
ಆಯ್ಕೆ ಸಮಿತಿ ಬುಮ್ರಾರನ್ನು ಉಪನಾಯಕನಾಗಿ ಉನ್ನತೀಕರಿಸುತ್ತಿರುವ ನಿರ್ಧಾರ ಖಂಡಿತ ರಿಷಭ್ ಪಂತ್ ಮತ್ತು ಶ್ರೇಯರ್ ಅವರಿಗೆ ಎಲ್ಲಾ ಮಾದರಿಯಲ್ಲೂ ಅತ್ಯುನ್ನತ ಪ್ರದರ್ಶನ ತೋರುವುದರ ಕಡೆಗೆ ಹೆಚ್ಚಿನ ಗಮನ ನೀಡಬೇಕು ಎಂಬುದನನ್ನ ಪರೋಕ್ಷವಾಗಿ ಎಚ್ಚರಿಕೆ ನೀಡಿದೆ ಎಂದು ಆಯ್ಕೆ ಸಮಿತಿಗೆ ಹತ್ತಿರವಾಗಿರುವ ಮೂಲ ಪಿಟಿಐಗೆ ತಿಳಿಸಿದೆ.
ಇದು ಕೇವಲ ಒಂದು ಸರಣಿಗೆ ಮಾತ್ರ. ರೋಹಿತ್ ಶರ್ಮಾ ತವರಿನಲ್ಲಿ ನಡೆಯುವ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೆ ತಂಡಕ್ಕೆ ವಾಪಸಾಗಲಿದ್ದಾರೆ. ಆಗ ಕೆ ಎಲ್ ರಾಹುಲ್ ಮತ್ತೆ ಉಪನಾಯಕನಾಗಲಿದ್ದಾರೆ ಎಂದು ಬಿಸಿಸಿಐ ಮೂಲ ತಿಳಿಸಿದೆ.
ಆದಾಗ್ಯೂ ಆಯ್ಕೆ ಸಮಿತಿ ಜಸ್ಪ್ರೀತ್ ಬುಮ್ರಾ ಅವರ ಸ್ಥಿರತೆ ಮತ್ತು ಕ್ರಿಕೆಟ್ ಜ್ಞಾನಕ್ಕೆ ಬಹುಮಾನ ನೀಡಲು ಬಯಸಿದ್ದರು. ಅದಕ್ಕಾಗಿಯೇ ಪಂತ್ ಮತ್ತು ಅಯ್ಯರ್ ಅವರ ಮುಂಚಿತವಾಗಿ ಭಾರತೀಯ ಸ್ಟಾರ್ ವೇಗಿಯನ್ನು ಉಪನಾಯಕನಾಗಿ ನೇಮಕ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಇನ್ನು ಆಯ್ಕೆ ಸಮಿತಿ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ಮಾಜಿ ಆಯ್ಕೆ ಸಮಿತಿ ಮುಖ್ಯಸ್ಥ ಎಂಎಸ್ಕೆ ಪ್ರಸಾದ್, ಜಸ್ಪ್ರೀತ್ ಬುಮ್ರಾ ತರ್ಕಬದ್ಧತೆಯನ್ನು ಹೊಂದಿರುವ ಅತ್ಯಂತ ಸಂವೇದನಾಶೀಲ ಯುವಕ.
ಹಾಗಿರುವಾಗ ಆತನಿಗೆ ಏಕೆ ಈ ಗೌರವ ನೀಡಬಾರದು? ನಾನು ಈ ನಿರ್ಧಾರವನ್ನು ಇಷ್ಟಪಡುತ್ತೇನೆ. ಎಲ್ಲಾ ಮಾದರಿಯ ಕ್ರಿಕೆಟ್ನಲ್ಲೂ ಅತ್ಯತ್ತಮ ಪ್ರದರ್ಶನ ನೀಡುತ್ತಿರುವಾಗ ಬೌಲರ್ಗಳನ್ನು ಏಕೆ ನಾಯಕನನ್ನಾಗಿ ಮಾಡಲು ಸಾಧ್ಯವಿಲ್ಲ? ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ:ಕೊಹ್ಲಿ ಮತ್ತು ರೋಹಿತ್ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ: ಆಯ್ಕೆಸಮಿತಿ ಅಧ್ಯಕ್ಷ ಚೇತನ್ ಶರ್ಮಾ