ನವದೆಹಲಿ : ಕೊರೊನಾದಿಂದ ತನ್ನ ಕುಟುಂಬದವರನ್ನು ಕಳೆದುಕೊಂಡ ಟೀಂ ಇಂಡಿಯಾದ ಆಟಗಾರ್ತಿ ವೇದಾ ಕೃಷ್ಣಮೂರ್ತಿ ಅವರ ನೋವಿಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಅನುಕಂಪ ವ್ಯಕ್ತವಾಗಿತ್ತು. ಅಲ್ಲದೇ ಬಿಸಿಸಿಐ ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿತ್ತು. ಇದಾದ ಬಳಿಕ ಈಗ ವೇದಾ ಕೃಷ್ಣಮೂರ್ತಿ ಅವರಿಗೆ ಸ್ಪಂದಿಸಿರುವ ಬಿಸಿಸಿಐ, ಸಮಾಧಾನದ ಮಾತುಗಳನ್ನಾಡಿದೆ.
ಇಂತಹ ಸಂದಿಗ್ಧದ ನಡುವೆಯೂ ಬಿಸಿಸಿಐ ತನ್ನ ನೋವು ಆಲಿಸಿದೆ. ತನ್ನ ಕುಟುಂಬದಲ್ಲಾದ ದುರಂತವನ್ನು ಕಂಡು ಬಿಸಿಸಿಐ ಧೈರ್ಯದ ಮಾತುಗಳನ್ನಾಡಿದೆ ಎಂದು ನೋವಿನ ನಡುವೆಯೂ ವೇದಾ ಕೃಷ್ಣಮೂರ್ತಿ ಬಿಸಿಸಿಐ ಮತ್ತು ಅದರ ಕಾರ್ಯದರ್ಶಿ ಜೈ ಷಾ ಅವರಿಗೆ ಧನ್ಯವಾದ ತಿಳಿಸಿದ್ದಾರೆ.
ಇತ್ತೀಚೆಗೆ ವೇದಾ ಕೃಷ್ಣಮೂರ್ತಿ ಅವರ ತಾಯಿ ಮತ್ತು ಸಹೋದರಿಯ ಹೊಟ್ಟೆ ಹೊಕ್ಕ ಹೆಮ್ಮಾರಿ ಕೊರೊನಾ ಅವರಿಬ್ಬರನ್ನು ಬಲಿ ತೆಗೆದುಕೊಂಡಿತ್ತು.
ಇದರ ನೋವಿನ ನಡುವೆ ಇಂಗ್ಲೆಂಡ್ ಪ್ರವಾಸಕ್ಕೆ ಮಹಿಳಾ ಆಟಗಾರ್ತಿಯ ಹೆಸರು ಅಂತಿಮಗೊಳಿಸಿ ಪಟ್ಟಿ ಬಿಡುಗಡೆ ಮಾಡಿತ್ತು. ಸಂತಾಪ ಹಾಗೂ ನೋವು ಆಲಿಸದ ಬಿಸಿಸಿಐ, ಆಯ್ಕೆ ಪಟ್ಟಿಯಲ್ಲಿ ವೇದಾ ಕೃಷ್ಣಮೂರ್ತಿ ಅವರ ಹೆಸರನ್ನು ಕೈಬಿಟ್ಟಿದ್ದಕ್ಕೆ ಹಲವು ಟೀಕೆಗಳನ್ನು ಎದಿರಿಸಿತ್ತು.
ಆಸ್ಟ್ರೇಲಿಯಾ ತಂಡದ ಮಾಜಿ ನಾಯಕಿ ಲೀಸಾ ಸ್ಥಾಲೇಕರ್ ಬಿಸಿಸಿಐ ಕ್ರಮ ಖಂಡಿಸಿದ್ದರು. ತಿಂಗಳ ಅಂತರದಲ್ಲಿ ತಾಯಿ ಮತ್ತು ಸಹೋದರಿಯನ್ನು ಕಳೆದುಕೊಂಡ ವೇದಾಕೃಷ್ಣಮೂರ್ತಿ ಬಗ್ಗೆ ಸ್ವಲ್ಪ ಮಾನವೀಯತೆ ಹಾಗೂ ಕಳಕಳಿಯಿಂದಾದರೂ ಮಾತನಾಡಬೇಕಿತ್ತು ಎಂದು ಟೀಕಿಸಿದ್ದರು.
ಇದನ್ನೂ ಓದಿ: ಕನ್ನಡತಿ ವೇದಾ ವಿಚಾರದಲ್ಲಿ ಬಿಸಿಸಿಐ ನಡೆ ಖಂಡಿಸಿದ ಆಸೀಸ್ ಮಾಜಿ ಕ್ರಿಕೆಟರ್ ಸ್ಥಾಲೇಕರ್
ಇಂತಹ ಟೀಕೆಗಳು ಕೇಳಿ ಬರುತ್ತಿದ್ದಂತೆ ಬಿಸಿಸಿಐ ಸಮಾಧಾನದ ಮಾತುಗಳನ್ನು ಹೇಳಿದೆ. ಈ ಹಿನ್ನೆಲೆ ನೋವಿನ ನಡುವೆಯೂ ವೇದಾ ಕೃಷ್ಣಮೂರ್ತಿ ಬಿಸಿಸಿಐ ಸ್ಪಂದನೆಗೆ ಧನ್ಯವಾದ ಅರ್ಪಿಸಿದ್ದಾರೆ.
ಇಂತಹ ಕಾಠಿಣ್ಯದ ಕಾಲದಲ್ಲಿಯೂ ಬಿಸಿಸಿಐ ನನ್ನ ಬೆನ್ನ ಹಿಂದೆ ನಿಂತಿದೆ. ನೋವು ಕೇಳಿದ ಹಿರಿಯರಿಗೆ ಪ್ರಾಮಾಣಿಕವಾಗಿ ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.