ಮುಂಬೈ (ಮಹಾರಾಷ್ಟ್ರ): ಚೊಚ್ಚಲ ಟಿ-20 ವಿಶ್ವಕಪ್ ಗೆದ್ದು ಚಾಂಪಿಯನ್ ಆಗಿ ಹೊರಹೊಮ್ಮಿದ ಭಾರತದ 19 ವರ್ಷದೊಳಗಿನ ವನಿತೆಯರ ತಂಡಕ್ಕೆ ಭಾರತೀಯ ನಿಯಂತ್ರಣ ಕ್ರಿಕೆಟ್ ಮಂಡಳಿ (ಬಿಸಿಸಿಐ) ವತಿಯಿಂದ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಂಡಿದೆ. ಫೆಬ್ರವರಿ 1ರಂದು ಗುಜರಾತ್ನ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಅಂಡರ್ 19 ಮಹಿಳಾ ತಂಡವನ್ನು ಭಾರತದ ದಿಗ್ಗಜ ಕ್ರಿಕೆಟಿಗ, ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಮತ್ತು ಬಿಸಿಸಿಐ ಪದಾಧಿಕಾರಿಗಳು ಸನ್ಮಾನಿಸಲಿದ್ದಾರೆ.
ಜನವರಿ 29ರಂದು ನಡೆದ ದಕ್ಷಿಣ ಆಫ್ರಿಕಾದ ಪೊಚೆಫ್ಸ್ಟ್ರೂಮ್ನ ಸೆನ್ವೆಸ್ ಪಾರ್ಕ್‌ನಲ್ಲಿ ನಡೆದ ಅಂಡರ್ -19 ಮಹಿಳಾ ಟಿ-20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ವಿರುದ್ಧ ಭಾರತೀಯ ವನಿತೆಯರ ತಂಡವು 7 ವಿಕೆಟ್ಗಳ ಅಂತರದಿಂದ ಭರ್ಜರಿ ಗಳಿಸಿ ವಿಶ್ವಕಪ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತ್ತು. ಈ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಮೊದಲ ಬಾರಿಗೆ ಆಯೋಜಿಸಿದ್ದ 9 ವರ್ಷದೊಳಗಿನ ವನಿತೆಯರ ವಿಶ್ವಕಪ್ ಟೂರ್ನಿಯಲ್ಲಿ ಮಿಂಚಿ ಚಾಂಪಿಯನ್ ಪಟ್ಟವನ್ನು ಭಾರತದ ತಂಡ ಅಲಂಕರಿಸಿತ್ತು.
ವಿಜೇತ ತಂಡಕ್ಕೆ ಅಭಿನಂದನೆ - ಜಯ್ ಶಾ ಟ್ವೀಟ್: ಅಭಿನಂದನಾ ಕಾರ್ಯಕ್ರಮ ಕಾರ್ಯಕ್ರಮದ ಬಗ್ಗೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ. ಫೆಬ್ರವರಿ 1ರಂದು ಸಂಜೆ 6.30ಕ್ಕೆ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಅಂಡರ್ 19 ಮಹಿಳಾ ವಿಶ್ವಕಪ್ ವಿಜಯಶಾಲಿ ಭಾರತ ತಂಡವನ್ನು ಭಾರತ ರತ್ನ ಸಚಿನ್ ತೆಂಡೂಲ್ಕರ್ ಮತ್ತು ಬಿಸಿಸಿಐ ಪದಾಧಿಕಾರಿಗಳು ಅಭಿನಂದಿಸಲಿದ್ದಾರೆ ಎಂಬ ವಿಷಯವನ್ನು ನಾನು ತುಂಬಾ ಸಂತೋಷದಿಂದ ಹಂಚಿಕೊಳ್ಳುತ್ತೇನೆ. ಯುವ ಕ್ರಿಕೆಟಿಗರು ಭಾರತವನ್ನು ಹೆಮ್ಮೆಪಡುವಂತೆ ಮಾಡಿದ್ದಾರೆ. ಅವರ ಸಾಧನೆಯನ್ನು ಗೌರವಿಸುತ್ತೇವೆ ಎಂದು ಜಯ್ ಶಾ ತಿಳಿಸಿದ್ದಾರೆ.
5 ಕೋಟಿ ಬಹುಮಾನ ಘೋಷಿಸಿರುವ ಬಿಸಿಸಿಐ: ಭಾರತದ ಯುವ ಮಹಿಳಾ ಕ್ರಿಕೆಟಿಗರು ವಿಶ್ವಕಪ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ದಿನವೇ ಬಿಸಿಸಿಐ, ಇಡೀ ತಂಡಕ್ಕೆ ಐದು ಕೋಟಿ ರೂಪಾಯಿಗಳ ಬಹುಮಾನವನ್ನು ಘೋಷಿಸಿತ್ತು. ಭಾರತದಲ್ಲಿ ವನಿತೆಯರ ಕ್ರಿಕೆಟ್ ಉನ್ನತ ಮಟ್ಟದಲ್ಲಿದೆ. ಈಗ ವಿಶ್ವಕಪ್ ವಿಜಯೋತ್ಸವವು ಮಹಿಳಾ ಕ್ರಿಕೆಟ್ ಅನ್ನು ಹೊಸ ಎತ್ತರಕ್ಕೆ ಕೊಂಡೊಯ್ದಿದೆ. ಭಾರತವನ್ನು ಹೆಮ್ಮೆ ಪಡುವಂತೆ ಮಾಡಿರುವ ಇಡೀ ತಂಡ ಮತ್ತು ಸಹಾಯಕ ಸಿಬ್ಬಂದಿಗೆ ತಂಡಕ್ಕೆ ಬಹುಮಾನದ ಮೊತ್ತವಾಗಿ ಐದು ಕೋಟಿ ಘೋಷಿಸಲು ನನಗೆ ನನಗೆ ಸಂತೋಷವಾಗಿದೆ ಎಂದು ಜನವರಿ 29ರಂದೇ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಟ್ವೀಟ್ ಮಾಡಿ ತಿಳಿಸಿದ್ದರು.
ಅಮೋಘ ಆಟ - ಭರ್ಜರಿ ಗೆಲುವು: ಇಂಗ್ಲೆಂಡ್ ತಂಡದ ವಿರುದ್ಧದ ಅಂಡರ್ 19 ಮಹಿಳಾ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತೀಯ ವನಿತೆಯರ ತಂಡವು ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ಅಮೋಘ ಆಟ ಪ್ರದರ್ಶಿಸಿತ್ತು. ಈ ಪಂದ್ಯದಲ್ಲಿ ಟೀಂ ಇಂಡಿಯಾದ ನಾಯಕಿ ಶಫಾಲಿ ವರ್ಮಾ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದರು. ಅದ್ಭುತ ಬೌಲಿಂಗ್ ಮಾಡಿದ್ದ ಭಾರತದ ಬೌಲರ್ಗಳು ಎದುರಾಳಿ ತಂಡವನ್ನು 17.1 ಓವರ್ಗಳಲ್ಲಿ 68 ತಂಡಕ್ಕೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾಗಿದ್ದರು. ಬಿಗಿಯಾದ ಬೌಲಿಂಗ್ ನೆರವಿನಿಂದ ಸಾಧಾರಣ ಮೊತ್ತದ ಗುರಿಯನ್ನು ಹೊಂದಿದ್ದ ಭಾರತೀಯ ವನಿತೆಯರು ಕೇವಲ 14 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 69 ರನ್ ಗಳಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದರು.
ಇದನ್ನೂ ಓದಿ: U19W T20 World Cup: ಚೊಚ್ಚಲ ವಿಶ್ವಕಪ್ ಗೆದ್ದ ಭಾರತದ ವನಿತೆಯರು, ತಂಡಕ್ಕೆ 5 ಕೋಟಿ ಬಹುಮಾನ