ದುಬೈ: ಕ್ರಿಕೆಟ್ ಲೋಕದಲ್ಲಿ ಅನಭಿಶಕ್ತ ದೊರೆಯಾಗಿ ಮೆರೆದಾಡಿದ ತಂಡ ಎಂದರೇ ಎಂಥವರ ಬಾಯಲ್ಲೂ ಬರುವ ಮೊದಲ ಹೆಸರೆಂದರೆ ಆಸ್ಟ್ರೇಲಿಯಾ. ಆದರೆ 5 ಏಕದಿನ ವಿಶ್ವಕಪ್ 2 ಚಾಂಪಿಯನ್ ಟ್ರೋಫಿ ಮತ್ತು ಅದೆಷ್ಟೋ ವರ್ಷಗಳ ಕ್ರಿಕೆಟ್ನಲ್ಲಿ ನಂಬರ್ 1 ಪಟ್ಟದಲ್ಲಿದ್ದರೂ ಟಿ20 ವಿಶ್ವಕಪ್ ಮಾತ್ರ ಮರೀಚಿಕೆಯಾಗಿತ್ತು.
ಆದರೆ ನವೆಂಬರ್ 14, 2021 ರಂದು ಕಾಂಗರೂ ಬಳಗದ 15 ವರ್ಷಗಳ ಕಾಯುವಿಕೆ ಅಂತ್ಯಗೊಂಡಿದೆ. ಅಲ್ಲದೆ ಐಸಿಸಿ ಆಯೋಜಿಸುವ ಎಲ್ಲಾ ಸೀಮಿತ ಓವರ್ಗಳ ಟೂರ್ನಿ ಗೆದ್ದ 5ನೇ ತಂಡ ಎನಿಸಿಕೊಂಡಿದೆ. ಭಾರತ, ವೆಸ್ಟ್ ಇಂಡೀಸ್, ಶ್ರೀಲಂಕಾ ಮತ್ತು ಪಾಕಿಸ್ತಾನ ತಂಡಗಳು ಎಲ್ಲಾ ಮಾದರಿಯ ಐಸಿಸಿ ಟ್ರೋಫಿಗಳನ್ನು ಜಯಿಸಿವೆ.
ಭಾನುವಾರ ದುಬೈನ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ 2021ರ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ನ್ಯೂಜಿಲ್ಯಾಂಡ್ ನೀಡಿದ್ದ 173 ರನ್ಗಳನ್ನು ಇನ್ನು 7 ಎಸೆತಗಳಿರುವಂತೆ ಗೆದ್ದು ಚೊಚ್ಚಲ ಟಿ20 ವಿಶ್ವಕಪ್ ಎತ್ತಿ ಹಿಡಿದಿತ್ತು.
2007ರಿಂದ 6 ಆವೃತ್ತಿಗಳಲ್ಲಿ ಸ್ಪರ್ಧಿಸಿದ್ದ ಆಸ್ಟ್ರೇಲಿಯಾ ತಂಡಕ್ಕೆ ಏಕದಿನ ವಿಶ್ವಕಪ್ನಲ್ಲಿ ಸಿಕ್ಕಷ್ಟು ಯಶಸ್ಸು ಸಿಕ್ಕಿರಲಿಲ್ಲ. 12 ಏಕದಿನ ವಿಶ್ವಕಪ್ಗಳಲ್ಲಿ 7 ಫೈನಲ್ ತಲುಪಿದ್ದ ಕಾಂಗರೂ ಬಳಗ 5 ಬಾರಿ ಚಾಂಪಿಯನ್ ಪಟ್ಟಕ್ಕೇರಿತ್ತು. 2000ರ ದಶಕದಲ್ಲಿ ಕ್ರಿಕೆಟ್ನಲ್ಲಿ ಪ್ರಾಬಲ್ಯ ಸಾಧಿಸಿದ್ದ ಆಸ್ಟ್ರೇಲಿಯಾ ತಂಡ ಟ್ರೋಪಿ ಎತ್ತಿ ಹಿಡಿಯುವಲ್ಲಿ ವಿಫಲವಾಗಿತ್ತು. 2010ರಲ್ಲಿ ಫೈನಲ್ ತಲುಪಿದರೂ ಇಂಗ್ಲೆಂಡ್ ವಿರುದ್ಧ ಸೋಲು ಕಂಡು ನಿರಾಸೆಯನುಭವಿಸಿತ್ತು. ಇದೀಗ 7ನೇ ಆವೃತ್ತಿಯಲ್ಲಿ ಆ ಕನಸು ಕೂಡ ಇಡೇರಿದಂತಾಗಿದೆ.
ಒಟ್ಟು ಆಸ್ಟ್ರೇಲಿಯಾ 7 ಏಕದಿನ ವಿಶ್ವಕಪ್ 2 ಚಾಂಪಿಯನ್ ಟ್ರೋಫಿ ಮತ್ತು 2 ಟಿ20 ವಿಶ್ವಕಪ್ಗಳಲ್ಲಿ ಫೈನಲ್ ಪ್ರವೇಶಿಸಿದ್ದು ಅದರಲ್ಲಿ ಮೂರುವ ಸೋಲು ಕಂಡಿದೆ. 1975 ಮತ್ತು 1995ರ ಏಕದಿನ ವಿಶ್ವಕಪ್ ಮತ್ತು 2010ರ ಟಿ20 ವಿಶ್ವಕಪ್ನಲ್ಲಿ ಆಸ್ಟ್ರೇಲಿಯಾ ಸೋಲು ಕಂಡಿತ್ತು. ಈ ಮೂರು ಫೈನಲ್ ಹೊರೆತುಪಡಿಸಿದರೆ ಆಸೀಸ್ ಎಲ್ಲಾ ಫೈನಲ್ಸ್ನಲ್ಲೂ ಜಯ ಸಾಧಿಸಿದೆ.
ಆಸ್ಟ್ರೇಲಿಯಾ ಗೆದ್ದ ಐಸಿಸಿ ಟ್ರೋಫಿಗಳ ವಿವರ
- 1987- ಏಕದಿನ ವಿಶ್ವಕಪ್
- 1999-ಏಕದಿನ ವಿಶ್ವಕಪ್
- 2003-ಏಕದಿನ ವಿಶ್ವಕಪ್
- 2006-ಚಾಂಪಿಯನ್ ಟ್ರೋಪಿ
- 2007-ಏಕದಿನ ವಿಶ್ವಕಪ್
- 2009-ಚಾಂಪಿಯನ್ ಟ್ರೋಪಿ
- 2015-ಏಕದಿನ ವಿಶ್ವಕಪ್
- 2021-ಟಿ20 ವಿಶ್ವಕಪ್
ಇದನ್ನು ಓದಿ:T20I world cup: ನ್ಯೂಜಿಲ್ಯಾಂಡ್ ಮಣಿಸಿ ಚೊಚ್ಚಲ ಟಿ20 ವಿಶ್ವಕಪ್ ಮುಡಿಗೇರಿಸಿಕೊಂಡ ಆಸ್ಟ್ರೇಲಿಯಾ