ಮುಂಬೈ (ಮಹಾರಾಷ್ಟ್ರ): ನಾಯಕಿ ಅಲಿಸ್ಸಾ ಹೀಲಿ ಮತ್ತು ಬೆತ್ ಮೂನಿ ಭರ್ಜರಿ ಅರ್ಧಶತಕದ ನೆರವಿನಿಂದ ಆಸ್ಟ್ರೇಲಿಯಾ ವನಿತೆಯರ ತಂಡವು ಭಾರತ ವಿರುದ್ಧ ಟಿ-20 ಸರಣಿಯನ್ನು ತನ್ನಾಗಿಸಿಕೊಂಡಿದೆ. ಮೊದಲ ಗೆದ್ದು ಸರಣಿಯಲ್ಲಿ ಶುಭಾರಂಭ ಮಾಡಿದ್ದ ಟೀಂ ಇಂಡಿಯಾ ನಂತರದ ಎರಡು ಪಂದ್ಯಗಳನ್ನು ಸೋಲು ಮೂಲಕ ತವರಿನಲ್ಲಿ 1-2 ಅಂತರರಿಂದ ಸರಣಿಯನ್ನು ಕೈಚೆಲ್ಲಿಸಿದೆ.
ನವಿ ಮುಂಬೈನಲ್ಲಿ ಮಂಗಳವಾರ ನಡೆದ ಟಿ-20 ಸರಣಿಯ ಮೂರನೇ ಮತ್ತು ಅಂತಿಮ ಪಂದ್ಯದಲ್ಲಿ ಭಾರತೀಯ ವನಿತೆಯರು ಟಾಸ್ ಸೋತು ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 147 ರನ್ಗಳನ್ನು ಕಲೆ ಹಾಕಿದ್ದರು. ಈ ಗೆಲುವಿನ ಗುರಿ ಬೆನ್ನಟ್ಟಿದ್ದ ಆಸೀಸ್ ತಂಡ 18.4 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 149 ರನ್ ಬಾರಿಸಿ ಜಯದ ನಗೆ ಬೀರಿತು. ಆರಂಭಿಕರಾದ ನಾಯಕಿ ಅಲಿಸ್ಸಾ ಹೀಲಿ ಮತ್ತು ಬೆತ್ ಮೂನಿ ಆಕರ್ಷಕ ಅರ್ಧಶತಕಗಳನ್ನು ಸಿಡಿಸಿ ಗೆಲುವಿಗೆ ಕಾರಣರಾದರು.
ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಈ ಜೋಡಿ 10 ಓವರ್ಗಳಲ್ಲಿ 85 ಓವರ್ ರನ್ಗಳ ಕಲೆ ಹಾಕಿ ಬೇರ್ಪಟ್ಟಿತು. ಅದರಲ್ಲೂ, ತಮ್ಮ 150ನೇ ಟಿ-20 ಪಂದ್ಯ ಆಡುತ್ತಿದ್ದ ಅಲಿಸ್ಸಾ ಹೀಲಿ ಅಬ್ಬರಿಸಿದರು. 38 ಬಾಲ್ಗಳಲ್ಲೇ ಭರ್ಜರಿ 9 ಬೌಂಡರಿಗಳು, 1 ಸಿಕ್ಸರ್ ಸಮೇತವಾಗಿ 55 ರನ್ ಬಾರಿಸಿ ನಿರ್ಗಮಿಸಿದರು. 38 ರನ್ ಗಳಿಸಿದ್ದಾಗ ಹೀಲಿ ಅವರಿಗೆ ಜೀವದಾನ ಪಡೆದರು. ಇದು ಟೀಂ ಇಂಡಿಯಾದ ಪಾಲಿಗೆ ಮುಳುವಾಗಿ ಪರಿಣಮಿಸಿತು.
ಮತ್ತೊಂದೆಡೆ, ಮೂರನೇ ಕ್ರಮಾಂಕದಲ್ಲಿ ತಹ್ಲಿಯಾ ಮೆಗ್ರಾತ್ (20 ರನ್), ಎಲ್ಲಿಸ್ ಪೆರ್ರಿ ಅವರನ್ನು ಪೂಜಾ ವಸ್ತ್ರಾಕರ್ ಬೇಗನೆ ಪೆವಿಲಿಯನ್ಗೆ ಕಳುಹಿಸಿದರು. ಆದರೆ, ಅಷ್ಟೊತ್ತಿಗೆ ಆಸೀಸ್ ಪಡೆ ಸುಭದ್ರ ಸ್ಥಿತಿಯಲ್ಲಿತ್ತು. ಈ ವಿಕೆಟ್ ಬಿದ್ದರೂ ಕೊನೆಯವರೆಗಿದ್ದ ಬೆತ್ ಮೂನಿ ಅಜೇಯ 52 ರನ್, ಫೋಬೆ ಲಿಚ್ಫೀಲ್ಡ್ ಅಜೇಯ 17 ರನ್ ಸಿಡಿಸಿದರು. ಇದರಿಂದ ತಂಡವನ್ನು ಗೆಲುವಿನ ದಡ ಸೇರಿಸಿದರು. ಭಾರತ ಪರ ಪೂಜಾ ವಸ್ತ್ರಾಕರ್ ಎರಡು ವಿಕೆಟ್ ಪಡೆದರೆ, ದೀಪ್ತಿ ಶರ್ಮಾ 1 ವಿಕೆಟ್ ಪಡೆದರು.
ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿ ಟೀಂ ಇಂಡಿಯಾ ಉತ್ತಮ ಆರಂಭವನ್ನೇ ಪಡೆಯಿತು. ಆದರೆ, ಮಧ್ಯ ಕ್ರಮಾಂಕದಲ್ಲಿ ದಿಢೀರ್ ಕುಸಿತ ಕಂಡಿತು. ಆರಂಭಿಕರಾದ ಶಫಾಲಿ ವರ್ಮಾ ಮತ್ತು ಸ್ಮೃತಿ ಮಂಧಾನ ಇನ್ನಿಂಗ್ಸ್ ಶುರುವಿನಿಂದಲೇ ಅಬ್ಬರಿಸಿದರು. ಶಫಾಲಿ 17 ಎಸೆತಗಳಲ್ಲೇ 6 ಬೌಂಡರಿಗಳ ಸಮೇತ 26 ರನ್ ಸಿಡಿಸಿ ನಿರ್ಗಮಿಸಿದರು.
ಮೂರನೇ ಕ್ರಮಾಂಕದಲ್ಲಿ ಬಂದ ಜೆಮಿಮಾ ರಾಡ್ರಿಗಸ್ ಕೇವಲ 2 ರನ್ ಗಳಿಸಿ ಔಟಾದರು. ಮತ್ತೊಂದೆಡೆ, ತಂಡದ ಮೊತ್ತದ ಎಂಟು ಓವರ್ಗಳಲ್ಲಿ 60 ರನ್ ಆಗಿತ್ತು. ಹೀಗಾಗಿ ದೊಡ್ಡ ಮೊತ್ತ ಪೇರಿಸುವ ಭಾರತ ತಂಡ ನಿರೀಕ್ಷೆ ಇತ್ತು. ಆದರೆ, ಉತ್ತಮ ಬ್ಯಾಟ್ ಬೀಸುತ್ತಿದ್ದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧಾನ ಸಹ ವಿಕೆಟ್ ಒಪ್ಪಿಸಿದರು. 28 ಬಾಲ್ಗಳನ್ನು ಎದುರಿಸಿದ ಮಂಧಾನ ಎರಡು ಬೌಂಡರಿ, ಒಂದು ಸಿಕ್ಸರ್ ಸಮೇತ 29 ರನ್ ಕಲೆ ಹಾಕಿದರು. ಇದಾದ ನಂತರದಲ್ಲಿ ನಾಯಕಿ ಹರ್ಮನ್‌ಪ್ರೀತ್ ಕೌರ್ 3 ರನ್ ಬಾರಿಸಿ ಪೆವಿಲಿಯನ್ಗೆ ಸೇರಿದರು. ಇದರಿಂದ 4 ರನ್ಗಳ ಅಂತರದಲ್ಲಿ ಪ್ರಮುಖ ಮೂರು ವಿಕೆಟ್ಗಳನ್ನು ಟೀಂ ಇಂಡಿಯಾ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಬೇಕಾಯಿತು.
ಈ ನಡುವೆ ವಿಕೆಟ್ ಕೀಪರ್ ರಿಚಾ ಘೋಷ್ ಮತ್ತು ದೀಪಾ ಶರ್ಮಾ ತಂಡಕ್ಕೆ ಆಸರೆಯಾದರು. ದೀಪಾ ಶರ್ಮಾ 14 ರನ್ಗಳ ಕೊಡುಗೆ ನೀಡಿದರು. ಈ ಮೂಲಕ ಐದನೇ ವಿಕೆಟ್ಗೆ 33 ರನ್ಗಳ ಜೊತೆಯಾಟ ನೀಡಿದ ಈ ಜೋಡಿ ತಂಡವನ್ನು 100 ಗಡಿಗೆ ತಲುಪಿಸಿತು. ಮತ್ತೊಂದೆಡೆ, ರಿಚಾ ಘೋಷ್ ಬಿರುಸಿನ ಬ್ಯಾಟ್ 28 ಬಾಲ್ಗಳಲ್ಲಿ 34 ರನ್ ಸಿಡಿಸಿ ತಂಡವನ್ನು ಸ್ಪರ್ಧಾತ್ಮಕ ಮೊತ್ತಕ್ಕೆ ಏರಿಸಿದರು.
ಅಲ್ಲದೇ, ಅಮಂಜೋತ್ ಕೌರ್ ಸಹ 14 ಎಸೆತಗಳಲ್ಲಿ 17 ರನ್, ಪೂಜಾ ವಸ್ತ್ರಾಕರ್ 2 ಎಸತೆಗಳಲ್ಲಿ 7 ರನ್ ಬಾರಿಸಿ ಅಮೂಲ್ಯ ಕೊಡುಗೆ ನೀಡಿದರು. ಇದರಿಂದ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 147 ರನ್ ಪೇರಿಸಲು ಭಾರತ ತಂಡಕ್ಕೆ ಸಾಧ್ಯವಾಗಿತ್ತು. ಆಸೀಸ್ ಪರ ಅನಾಬೆಲ್ ಸದರ್ಲ್ಯಾಂಡ್, ಜಾರ್ಜಿಯಾ ವೇರ್ಹ್ಯಾಮ್ ತಲಾ ಎರಡು ವಿಕೆಟ್ ಮತ್ತು ಮೇಗನ್ ಸ್ಚುಟ್, ಆಶ್ಲೀಗ್ ಗಾರ್ಡ್ನರ್ 1 ವಿಕೆಟ್ ಪಡೆದರು.
ಇದನ್ನೂ ಓದಿ: ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಗೆ ಭಾರತ ಸಿದ್ಧ: ರೋಹಿತ್ ಜೊತೆ ಇನ್ನಿಂಗ್ಸ್ ಆರಂಭಿಸುವವರು ಯಾರು?