ಕೊಲಂಬೊ (ಶ್ರೀಲಂಕಾ): ಏಷ್ಯಾಕಪ್ನ ಸೂಪರ್ ಫೋರ್ನ ಬಹುತೇಕ ಪಂದ್ಯಗಳು ಶ್ರೀಲಂಕಾಶದಲ್ಲಿ ನಡೆಯಲಿದೆ. ಈಗಾಗಲೇ ಸಿಂಹಳದಲ್ಲಿ ನಡೆದ ಎರಡು ಪಂದ್ಯಕ್ಕೆ ಮಳೆ ಕಾಡಿದೆ. ಅಲ್ಲದೇ ಸಪ್ಟೆಂಬರ್ 20ರ ವರೆಗೆ ಲಂಕಾದಲ್ಲಿ ಮಳೆಯ ಮುನ್ಸೂಚನೆ ಇದೆ. ಅದರಲ್ಲೂ ಸೂಪರ್ ಫೋರ್ ಹಂತದ ಎಲ್ಲ ಪಂದ್ಯಗಳು ಮತ್ತು ಏಷ್ಯಾಕಪ್ನ ಫೈನಲ್ ಪಂದ್ಯವನ್ನು ಸಹ ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ.
ಈ ಮೈದಾನದ ಸುತ್ತ ಸೆಪ್ಟೆಂಬರ್ 20 ವರಗೆ ಮಳೆಯ ಸಂಭವ ಇರುವುದರಿಂದ ಸ್ಥಳಾಂತರದ ಬಗ್ಗೆ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಮತ್ತು ಶ್ರೀಲಂಕಾ ಕ್ರಿಕೆಟ್ ಮಂಡಳಿ (ಎಸ್ಎಲ್ಬಿ) ನಡುವೆ ಚರ್ಚೆಗಳು ನಡೆದಿವೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿದೆ. ವರದಿಯ ಪ್ರಕಾರ ಪ್ರತಿಕೂಲ ಹವಾಮಾನದ ಹಿನ್ನೆಲೆಯಲ್ಲಿ ಹಂಬಂಟೋಟಾಕ್ಕೆ ಸ್ಥಳಾಂತರಗೊಳ್ಳಲು ಸಿದ್ಧವಾಗಿವೆ. ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಶೀಘ್ರದಲ್ಲೇ ಈ ಬದಲಾವಣೆಯ ಅಧಿಕೃತ ಘೋಷಣೆ ಮಾಡುವ ನಿರೀಕ್ಷೆಯಿದೆ.
ಅಲ್ಲಿನ ವರದಿಗಳಲ್ಲಿ "ಎಸಿಸಿಯು ಹಂಬಂಟೋಟಾದಲ್ಲಿನ ಹವಾಮಾನದ ಮಾದರಿಗಳನ್ನು ಗಣನೆಗೆ ತೆಗೆದುಕೊಂಡಿದೆ. ಸೂಪರ್ 4 ಹಂತಕ್ಕೆ ಮೂಲ ಸ್ಥಳವಾದ ಕೊಲಂಬೊಕ್ಕೆ ಹೋಲಿಸಿದರೆ ಮಳೆಯ ಪ್ರಮಾಣ ಹಂಬಂಟೋಟದಲ್ಲಿ ಕಡಿಮೆ ಇರುವುದರಿಂದ ಪಂದ್ಯಗಳಿಗೆ ಹೆಚ್ಚು ಅನುಕೂಲಕರವಾಗಿದೆ ಎಂದು ಗಮನಿಸಲಾಗಿದೆ" ಎಂದು ಹೇಳಿದೆ.
"ಯುಎಇಗೆ ಪಂದ್ಯಗಳನ್ನು ಸ್ಥಳಾಂತರಿಸುವ ಆರಂಭಿಕ ಪರಿಗಣನೆಯಲ್ಲಿದ್ದರೂ, ಆಟಗಾರರ ಯೋಗಕ್ಷೇಮದ ಬಗ್ಗೆ ಕಳವಳದಿಂದಾಗಿ ಈ ಆಲೋಚನೆಯನ್ನು ಅಂತಿಮವಾಗಿ ಕೈಬಿಡಲಾಯಿತು. ವಿಶ್ವಕಪ್‌ಗೆ ಕೇವಲ ಮೂರು ವಾರಗಳ ಮೊದಲು ಯುಎಇಯ ತೀವ್ರವಾದ ಶಾಖದಲ್ಲಿ ಆಡುವುದು ಆರೋಗ್ಯ ಅಪಾಯ ಉಂಟು ಮಾಡುವ ಸಾಧ್ಯತೆಯ ಹಿನ್ನೆಲೆಯಲ್ಲಿ ಅಲ್ಲಿ ಆಡಿಸದಿರಲು ತಿರ್ಮಾನಿಸಲಾಗಿತ್ತು." ಎಂದು ವರದಿ ಹೇಳಿದೆ.
ಪಲ್ಲೆಕೆಲೆಯಲ್ಲಿ ನಡೆದ ಏಷ್ಯಾಕಪ್ನ ಎರಡು ಪಂದ್ಯಗಳಿಗೆ ಮಳೆ ಅಡ್ಡಿ ಮಾಡಿದೆ. ಪಾಕಿಸ್ತಾನ ಮತ್ತು ಭಾರತದ ನಡುವೆ ನಡೆದ ಹೈವೋಲ್ಟೇಜ್ ಪಂದ್ಯ ಮಳೆಯಿಂದಾಗಿ ರದ್ದಾಯಿತು. ಇದರಿಂದ ಎಸಿಸಿ ಮತ್ತು ಎಸ್ಎಲ್ಬಿಗೆ ನಷ್ಟವಾಗಿದೆ. ನಿನ್ನೆ (ಸೋಮವಾರ) ಭಾರತ ಮತ್ತು ನೇಪಾಳ ನಡುವಿನ ಪಂದ್ಯಕ್ಕೂ ಮಳೆ ಬಂದ ಕಾರಣ ಎರಡನೇ ಇನ್ನಿಂಗ್ಸ್ ಅನ್ನು ಡಿಎಲ್ಎಸ್ ಮಾದರಿಯಂತೆ 23 ಓವರ್ಗೆ ಕುಂಟಿತ ಮಾಡಿ 145 ರನ್ ಗುರಿಯನ್ನು ಕೊಡಲಾಯಿತು.
ಇಂದು ಶ್ರೀಲಂಕಾ ಮತ್ತು ಅಫ್ಘಾನಿಸ್ತಾನದ ನಡುವೆ ನಡೆಯುತ್ತಿರುವ ಪಂದ್ಯ ಏಷ್ಯಾಕಪ್ನ ಕೊನೆಯ ಗುಂಪು ಹಂತದ ಪಂದ್ಯವಾಗಿದೆ. ನಾಳೆಯಿಂದ ಸೂಪರ್ ಫೋರ್ ಹಂತದ ಪಂದ್ಯಗಳು ನಡೆಯಲಿದೆ. ಇಂದಿನ ಪಂದ್ಯದ ಫಲಿತಾಂಶದ ಆಧಾರದಲ್ಲಿ ನಾಳೆ ಪಾಕಿಸ್ತಾನದ ಜೊತೆ ಯಾರು ಆಡಲಿದ್ದಾರೆ ಎಂಬುದು ನಿರ್ಧಾರ ಆಗಲಿದೆ. (ಐಎಎನ್ಎಸ್)
ಇದನ್ನೂ ಓದಿ: AFG vs SL: ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಲಂಕಾ.. ಪಂದ್ಯ ಜಯಿಸಿದವರಿಗೆ ಸೂಪರ್ ಫೋರ್ನಲ್ಲಿ ಸ್ಥಾನ