ನವದೆಹಲಿ: 24 ವರ್ಷಗಳ ನಂತರ ಪಾಕಿಸ್ತಾನ ಪ್ರವಾಸ ಕೈಗೊಳ್ಳುತ್ತಿರುವ ಆಸ್ಟ್ರೇಲಿಯಾ ತಂಡಕ್ಕೆ ಆರಂಭದಲ್ಲೇ ಅಡಚಣೆಯುಂಟಾಗಿದೆ. ಆಲ್ರೌಂಡರ್ ಆಶ್ಟನ್ ಅಗರ್ ಅವರು ಪಾಕಿಸ್ತಾನಕ್ಕೆ ಹೋಗಬಾರದೆಂದು ಸಾಮಾಜಿಕ ಜಾಲಾತಾಣದಲ್ಲಿ ಆತನ ಪತ್ನಿ ಮೆಡಿಲೀನ್ ಅವರಿಗೆ ಬೆದರಿಕೆ ಹಾಕಿರುವ ಘಟನೆ ಬೆಳಕಿಗೆ ಬಂದಿದೆ.
1998ರ ನಂತರ ಆಸ್ಟ್ರೇಲಿಯಾ ತಂಡ ಪಾಕಿಸ್ತಾನಕ್ಕೆ ಐತಿಹಾಸಿಕ ಪ್ರವಾಸ ಕೈಗೊಳ್ಳುತ್ತಿದೆ. ಮಾರ್ಚ್ 4 ರಿಂದ ಆರಂಭವಾಗಲಿರುವ ಪ್ರವಾಸದಲ್ಲಿ 3 ಟೆಸ್ಟ್, 3 ಏಕದಿನ ಮತ್ತು ಏಕೈಕ ಟಿ-20 ಪಂದ್ಯವನ್ನಾಡಲಿದೆ. ಈ ಪ್ರವಾಸದಲ್ಲಿ ಅಗರ್ ಮೂರು ಮಾದರಿಯ ತಂಡದಲ್ಲೂ ಅವಕಾಶ ಪಡೆದಿದ್ದಾರೆ.
ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ಮತ್ತು ದಿ ಏಜ್ ವರದಿಯ ಪ್ರಕಾರ, ಆಸ್ಟ್ರೇಲಿಯಾ ತಂಡದ ವಕ್ತಾರರೊಬ್ಬರು ಅಗರ್ಗೆ ಜೀವ ಬೆದರಿಕೆ ಸಂದೇಶ ಬಂದಿರುವುದನ್ನು ಖಚಿತಪಡಿಸಿದ್ದಾರೆ. ಆದಾಗ್ಯೂ, ಈ ಬೆದರಿಕೆ ಸಂದೇಶ ಬಂದಿರುವುದು ಒಂದು ನಕಲಿ ಇನ್ಸ್ಟಾಗ್ರಾಮ್ ಖಾತೆಯಾಗಿದ್ದು, ಅದರಲ್ಲೂ ಭಾರತದಿಂದ ಸಾಧ್ಯತೆಯಿದೆ ಎಂದು ಭದ್ರತಾ ತಂಡ ತಿಳಿಸಿದೆ. ಆದರೂ ಅಗರ್ ತಮ್ಮ ಪತ್ನಿಗೆ ನೇರ ಬೆದರಿಕೆ ಸಂದೇಶ ಬಂದರೂ ಪಾಕಿಸ್ತಾನದಲ್ಲಿ ಕ್ರಿಕೆಟ್ ಆಡುವುದಕ್ಕೆ ಅತ್ಯುತ್ಸಾಹದಿಂದ ಇರುವುದಾಗಿ ತಿಳಿಸಿದ್ದಾರೆ.
ನ್ಯೂಜಿಲ್ಯಾಂಡ್ ಮತ್ತು ಇಂಗ್ಲೆಂಡ್ ತಂಡಗಳು ಈ ವರ್ಷ ಪಾಕಿಸ್ತಾನ ಪ್ರವಾಸ ಕೈಗೊಳ್ಳಲಿವೆ. ಕಳೆದ ವರ್ಷ ಭದ್ರತಾ ಕಾರಣ ನೀಡಿ ಈ ಎರಡೂ ತಂಡಗಳು ಪ್ರವಾಸವನ್ನು ರದ್ದುಗೊಳಿಸಿದ್ದವು. ಆದರೆ, ಆಸ್ಟ್ರೇಲಿಯನ್ ಆಟಗಾರರು ಪಾಕ್ ನೆಲದಲ್ಲಿ ಯಾವುದೇ ಭದ್ರತೆಯ ಬಗ್ಗೆ ಅಷ್ಟೇನು ಚಿಂತಿಸುತ್ತಿಲ್ಲ, ಅವರು ಪಾಕಿಸ್ತಾನ ತಲುಪಿದಾಗಿನಿಂದಲೂ ಪ್ರವಾಸವನ್ನು ಎಂಜಾಯ್ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ:ಕಿಡ್ನಿ ಕಸಿ ಸರ್ಜರಿಗೊಳಗಾದ ಮಾಜಿ ಕ್ರಿಕೆಟಿಗನ ಚಿಕಿತ್ಸಾ ವೆಚ್ಚ HCAದಿಂದ ಭರಿಸುವುದಾಗಿ ಅಜರುದ್ದೀನ್ ಘೋಷಣೆ