ನವದೆಹಲಿ : 2019ರ ಏಕದಿನ ವಿಶ್ವಕಪ್ ತಂಡದಲ್ಲಿ ಅವಕಾಶ ಸಿಗದಿದ್ದಕ್ಕೆ ನೊಂದು ಎಲ್ಲಾ ಮಾದರಿಯ ಕ್ರಿಕೆಟ್ನಿಂದ ನಿವೃತ್ತಿ ಘೋಷಿಸಿದ್ದ ಅಂಬಾಟಿ ರಾಯುಡು ಮತ್ತೆ ಕ್ರಿಕೆಟ್ ಲೋಕಕ್ಕೆ ಮರಳುವುದಕ್ಕೆ ಸಿಎಸ್ಕೆ ಮತ್ತು ಧೋನಿ ಕಾರಣ ಎಂದು ಹೇಳಿಕೊಂಡಿದ್ದಾರೆ.
ಭಾರತ ತಂಡದಲ್ಲಿ ಖಾಯಂ ಆಟಗಾರನಾಗಿದ್ದರೂ, 2019ರ ವಿಶ್ವಕಪ್ ವೇಳೆ ಅವರನ್ನು ತಂಡದಿಂದ ಕೈಬಿಟ್ಟು ತಮಿಳುನಾಡಿನ ಆಲ್ರೌಂಡರ್ ವಿಜಯ್ ಶಂಕರ್ ಅವರನ್ನು ಆಯ್ಕೆ ಮಾಡಲಾಗಿತ್ತು. ಇದು ಭಾರತೀಯ ಕ್ರಿಕೆಟ್ ವಲಯದಲ್ಲಿ ಭಾರಿ ಚರ್ಚೆಗೀಡಾಗಿತ್ತು. ಇದರ ಬೆನ್ನಲ್ಲೇ ಅವಕಾಶ ವಂಚಿತನಾಗಿದ್ದಕ್ಕೆ ನೊಂದು ಸ್ವಲ್ಪ ದಿನಗಳ ನಂತರ ಎಲ್ಲಾ ಮಾದರಿಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದರು.
ಆದರೆ, ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ನಂತರ ಹತಾಶೆಗೆ ಒಳಗಾಗಿದ್ದ ಸಂದರ್ಭದಲ್ಲಿ ಮತ್ತೆ ಕ್ರಿಕೆಟ್ಗೆ ಮರಳುವುದಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ತಮ್ಮನ್ನು ಮನವೊಲಿಸಿತು ಎಂದು ಕ್ರಿಕ್ಬಜ್ ನಡೆಸಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
"ವಿಶ್ವಕಪ್ ನಿರಾಶೆಯಲ್ಲಿದ್ದ ವೇಳೆ ಸಿಎಸ್ಕೆ ಮ್ಯಾನೇಜ್ಮೆಂಟ್ ನನ್ನ ಜೊತೆ ಮಾತನಾಡಿ, ನನ್ನನ್ನು ಮತ್ತೆ ಕ್ರಿಕೆಟ್ಗೆ ಮರಳುವಂತೆ ಮನವೊಲಿಸಿದರು. ಇಂಡಿಯಾ ಸಿಮೆಂಟ್ ಪರ ಒಂದಷ್ಟು ಏಕದಿನ ಪಂದ್ಯಗಳನ್ನಾಡಲು ಹೇಳಿದರು. ಅಲ್ಲಿ ಆಡಿದ ನಂತರ ಆ ಕಷ್ಟದ ಸಂದರ್ಭಗಳನ್ನು ಮರೆತು ಮತ್ತೆ ಕ್ರಿಕೆಟ್ಗೆ ಮರಳಲು ನೆರವಾಯಿತು".
"ಖಂಡಿತವಾಗಿ ಆ ಕ್ಷಣಗಳು ನನಗೆ ತುಂಬಾ ಕಠಿಣವಾಗಿದ್ದವು. ನಾನು ಕ್ರಿಕೆಟ್ ಬಿಟ್ಟುಬಿಡಬೇಕೆಂದುಕೊಂಡಿದ್ದೆ. ಆ ಸಂದರ್ಭದಲ್ಲಿ ನನ್ನಲ್ಲಿ ಕ್ರಿಕೆಟ್ ಆಡುವುದಕ್ಕೆ ಏನೂ ಉಳಿದಿಲ್ಲ ಎಂಬ ಭಾವನೆ ಉಂಟಾಗಿತ್ತು. ಆದರೆ, ನನ್ನಲ್ಲಿ ಇನ್ನೂ ಕ್ರಿಕೆಟ್ ಇದೆ, ಜೊತೆಗೆ ಕ್ರಿಕೆಟ್ ಆಡುವುದಕ್ಕೆ ಬೇಕಾದ ಫಿಟ್‌ನೆಸ್ ಮತ್ತು ಆಡುವ ಮನಸ್ಸು ಇದೆ ಎಂದು ನನ್ನ ಫ್ರಾಂಚೈಸಿ ಮನವೊಲಿಸಿತು.
ನಂತರ ವಿಶ್ವಕಪ್ ತಂಡಕ್ಕೆ ಆಯ್ಕೆಯಾಗದಿರುವುದರಲ್ಲಿ ನನ್ನ ಪಾತ್ರವಿಲ್ಲದಿದ್ದರಿಂದ ನಾನೇಕೆ ಕ್ರಿಕೆಟ್ ಬಿಡಬೇಕು? ಎಂಬ ಭಾವನೆಯನ್ನ ನನ್ನಲ್ಲಿ ಉಂಟಾಯಿತು. ನಂತರ ನಾನು ಸಿಎಸ್ಕೆಗಾಗಿ ಆಡುವುದಕ್ಕೆ ಆರಂಭಿಸಿದೆ. ಇದೀಗ ಐಪಿಎಲ್ನಲ್ಲಿ ನಾನು ನನ್ನ ಕ್ರಿಕೆಟ್ ಅನ್ನು ಬಹಳ ಎಂಜಾಯ್ ಮಾಡುತ್ತಿದ್ದೇನೆ" ಎಂದು ರಾಯುಡು ಹೇಳಿದ್ದಾರೆ.
ಧೋನಿ ಶ್ರೇಷ್ಠ ನಾಯಕ : ಕಾಶಿ(ಸಿಎಸ್ಕೆ ಸಿಇಒ) ಸರ್ ಭೇಟಿಯ ನಂತರ ಧೋನಿ ಅವರನ್ನು ಭೇಟಿ ಮಾಡಿದೆ. ಆ ವ್ಯಕ್ತಿಗಳು ನನ್ನಲ್ಲಿ ಕ್ರಿಕೆಟ್ ಇನ್ನೂ ಉಳಿದಿದೆ ಎಂದು ಪ್ರಾಮಾಣಿಕವಾಗಿ ನಂಬಿದ್ದರು . ಹಾಗಾಗಿ ನನ್ನಿಂದ ಅತ್ಯುತ್ತಮವಾದದ್ದನ್ನು ಹೊರ ತೆಗೆಯುವಲ್ಲಿ ಅವರಿಂದ ಸಾಧ್ಯವಾಯಿತು. ಅದಕ್ಕಾಗಿ ನಾನು ಅವರಿಗೆ ಋಣಿಯಾಗಿರುತ್ತೇನೆ.
ಧೋನಿ ಭಾಯ್ ಪ್ರತಿಯೊಬ್ಬರಿಂದ ಅತ್ಯುತ್ತಮವಾದದ್ದನ್ನು ಹೇಗೆ ಹೊರ ತೆಗೆಯಬೇಕೆಂಬುವುದನ್ನ ಚೆನ್ನಾಗಿ ಅರಿತಿದ್ದಾರೆ. ಅದಕ್ಕಾಗಿಯೇ ಅವರು ವಿಶ್ವದ ನಂಬರ್ 1 ನಾಯಕ. ನನ್ನ ಪಾತ್ರದ ವಿಷಯದಲ್ಲಿ ನಾನು ಸಿಎಸ್ಕೆಯಲ್ಲಿ ತುಂಬಾ ಆರಾಮದಾಯಕವಾಗಿದ್ದೇನೆ. ಅವರು ನನ್ನಿಂದ ಏನನ್ನು ನಿರೀಕ್ಷಿಸುತ್ತಾರೋ ಅದಕ್ಕಿಂತ ಅತ್ಯುತ್ತಮ ಮತ್ತು ಶೆ.100% ಕ್ಕಿಂತ ಹೆಚ್ಚಿನದನ್ನು ನೀಡಲು ಬಯಸುತ್ತೇನೆ ಎಂದು ರಾಯಡು ತಿಳಿಸಿದ್ದಾರೆ.
ಇದನ್ನೂ ಓದಿ:ಕುಲ್ದೀಪ್-ಚಹಲ್ರನ್ನು ಒಟ್ಟಿಗೆ ಆಡಿಸಬೇಕೆಂಬುದು ನನ್ನ ಮನದಲ್ಲಿದೆ : ರೋಹಿತ್ ಶರ್ಮಾ