ಮುಂಬೈ: ಆಸ್ಟ್ರೇಲಿಯಾದಲ್ಲಿ ಆ್ಯಶಸ್ ಸರಣಿಯನ್ನು 0-4ರಿಂದ ಸೋಲು ಕಂಡ ಹಿನ್ನೆಲೆಯಲ್ಲಿ ಕ್ರಿಸ್ ಸಿಲ್ವರ್‌ವುಡ್ ಕೆಳಗಿಳಿದ ನಂತರ ಖಾಲಿ ಇರುವ ಇಂಗ್ಲೆಂಡ್ ತಂಡದ ಮುಖ್ಯ ಕೋಚ್ ಸ್ಥಾನವನ್ನು ತುಂಬಲು ನನಗೆ ಆಸಕ್ತಿ ಇಲ್ಲ ಎಂದು ಭಾರತ ಪುರುಷರ ಕ್ರಿಕೆಟ್ ತಂಡದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಖಡಾಖಂಡಿತವಾಗಿ ಹೇಳಿದ್ದಾರೆ.
ಭಾರತ ತಂಡದ ಪರ ಏಳು ವರ್ಷಗಳ ಕಾಲ ಕೋಚ್ ಆಗಿದ್ದ 59 ವರ್ಷದ ಭಾರತದ ಮಾಜಿ ಕ್ರಿಕೆಟಿಗ ಭಾರತ ಆಡಿದ್ದ 14 ಟೆಸ್ಟ್ ಸರಣಿಗಳಲ್ಲಿ 10ರಲ್ಲಿ ಗೆದ್ದು ಶ್ರೇಯಾಂಕದಲ್ಲಿ ನಂ. 1 ಸ್ಥಾನಕ್ಕೇರಿತ್ತು. ಆಸ್ಟ್ರೇಲಿಯಾವನ್ನು ಎರಡು ಬಾರಿ ಅವರ ಸ್ವಂತ ಅಂಗಳದಲ್ಲಿ ಮಣಿಸಿದ್ದು ಶಾಸ್ತ್ರಿ ಕೋಚಿಂಗ್ ವೃತ್ತಿ ಜೀವನದ ಹೈಲೈಟ್ ಆಗಿದೆ.
ಖಾಲಿ ಇರುವ ಇಂಗ್ಲೆಂಡ್ ಹುದ್ದೆಯನ್ನು ಭರ್ತಿ ಮಾಡಲು ನೀವೇನಾದರೂ ಆಸಕ್ತಿ ಹೊಂದಿದ್ದೀರಾ ಎಂದು ದಿ ಗಾರ್ಡಿಯನ್ ಸಂದರ್ಶನದಲ್ಲಿ ಕೇಳಿದ್ದಕ್ಕೆ, ಶಾಸ್ತ್ರಿ ಉತ್ತರಿಸಿದ್ದು, "ಅಯ್ಯೋ ಇಲ್ಲ, ಆ ದಾರಿಯಲ್ಲಿ ಮತ್ತೆ ಹೋಗುವುದಿಲ್ಲ. ಏಳು ವರ್ಷಗಳು ಭಾರತ ತಂಡದ ಜೊತೆಗೆ ಖಾಯಂ ಹುದ್ದೆಯಲ್ಲಿದ್ದೆ. ಒಂದು ವರ್ಷದಲ್ಲಿ 300 ದಿನಗಳು ಹೊರಗಿರಬೇಕು. 140 ಕೋಟಿ ಜನರು ಪ್ರತಿದಿನ ನಿಮ್ಮನ್ನು ಜಡ್ಜ್ ಮಾಡುತ್ತಿರುತ್ತಾರೆ. ಆ ಸ್ಥಾನಕ್ಕೆ ಆ ಸುದೀರ್ಘ ಸಮಯವನ್ನು ವ್ಯಯಿಸುವವರಿಗೆ ಒಳ್ಳೆಯದಾಗಲಿ ಎಂದು ಬಯಸುತ್ತೇನೆ" ಎಂದು ಶಾಸ್ತ್ರಿ ಹೇಳಿದ್ದಾರೆ.
ರೂಟ್ ನಾಯಕತ್ವದಿಂದ ಕೆಳಗಿಳಿದಿರುವುದರಿಂದ ಆ ಸ್ಥಾನಕ್ಕೆ ಬೆನ್ ಸ್ಟೋಕ್ಸ್ ಸೂಕ್ತ ಎಂದಿರುವ ಶಾಸ್ತ್ರಿ, ಜವಾಬ್ದಾರಿ ಹೆಚ್ಚಾದ ನಂತರ ಆಲ್ರೌಂಡರ್ ಮೈದಾನದಲ್ಲಿ ಇನ್ನೂ ಉತ್ತಮ ಪ್ರದರ್ಶನ ನೀಡಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ:ಬಿಡ್ ಮಾಡುವುದಾಗಿ ನಂಬಿಸಿ ಕೆಲವು ಫ್ರಾಂಚೈಸಿಗಳು ದ್ರೋಹ ಮಾಡಿದವು: ಹರ್ಷಲ್ ಪಟೇಲ್