ಕಳಪೆ ಫಾರ್ಮ್ನಿಂದ ಟೀಕೆಗೆ ಒಳಗಾಗಿದ್ದ ಕೊಹ್ಲಿ ಮತ್ತೆ ಬ್ಯಾಟ್ ಝಳಪಿಸುತ್ತಿದ್ದು, ದಾಖಲೆಗಳು ಉಡೀಸ್ ಆಗುವ ಸಮಯ ಬಂದಿದೆ. ಆಸ್ಟ್ರೇಲಿಯಾದಲ್ಲಿ ಇದೇ 16 ರಿಂದ ಆರಂಭವಾಗುವ ಟಿ20 ವಿಶ್ವಕಪ್ನಲ್ಲಿ ವಿರಾಟ್ ಮಿಂಚಿದರೆ, ಬೇರೆಯವರ ಹೆಸರಲ್ಲಿರುವ ಪ್ರಮುಖ ಮೂರು ದಾಖಲೆಗಳು ಮಣ್ಣು ಮುಕ್ಕಲಿವೆ.
1. ಟಿ20ಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ.. ಬ್ಯಾಟಿಂಗ್ ಕಿಂಗ್ ವಿರಾಟ್ ಕೊಹ್ಲಿ 109 ಪಂದ್ಯಗಳಿಂದ 3712 ರನ್ ಗಳಿಸಿದ್ದು, ಚುಟುಕು ಕ್ರಿಕೆಟ್ನಲ್ಲಿ ಅತಿ ಹೆಚ್ಚು ಗಳಿಸಿದವರ ಪಟ್ಟಿಯಲ್ಲಿ 2 ನೇ ಸ್ಥಾನದಲ್ಲಿದ್ದಾರೆ. 2010 ರಿಂದ ಟಿ20 ಆಡುತ್ತಿರುವ ಕೊಹ್ಲಿ 12 ವರ್ಷಗಳಲ್ಲಿ ಸ್ಥಿರ ಪ್ರದರ್ಶನ ನೀಡುತ್ತ ಬಂದಿದ್ದಾರೆ.
ವಿರಾಟ್ ವಿಶ್ವಕಪ್ನಲ್ಲಿ ಕೇವಲ 25 ರನ್ ಗಳಿಸಿದಲ್ಲಿ ಅತ್ಯಧಿಕ ರನ್ ಪೇರಿಸಿರುವ ಭಾರತದವರೇ ಆದ ನಾಯಕ ರೋಹಿತ್ ಶರ್ಮಾ 3737 ರನ್ಗಳನ್ನು ಮೀರಲಿದ್ದಾರೆ. ರೋಹಿತ್ 142 ಪಂದ್ಯಗಳಲ್ಲಿ ಇಷ್ಟು ರನ್ ಮಾಡಿದ್ದಾರೆ. ಕೊಹ್ಲಿ ಈ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ಅವಕಾಶವನ್ನು ಹೊಂದಿದ್ದಾರೆ.
ಇನ್ನು ಮೂರನೇ ಸ್ಥಾನದಲ್ಲಿ ಕೊಹ್ಲಿ ನಂತರ ಮಾರ್ಟಿನ್ ಗಪ್ಟಿಲ್ ಇದ್ದು, 121 ಪಂದ್ಯಗಳಲ್ಲಿ 3497 ರನ್ ಗಳಿಸಿದ್ದಾರೆ. ಕೊಹ್ಲಿ ಮತ್ತು ಗಪ್ಟಿಲ್ ಮಧ್ಯೆ 200 ಕ್ಕೂ ಅಧಿಕ ರನ್ ಅಂತರವಿದ್ದು, ಮಾರ್ಟಿನ್ರಿಂದ ದಾಖಲೆ ಮುರಿಯುವುದು ಕಷ್ಟ.
2. ಅತ್ಯಧಿಕ ಬೌಂಡರಿಗಳ ದಾಖಲೆ.. ವಿರಾಟ್ ಕೊಹ್ಲಿ ಸಿಕ್ಸರ್ ಸಿಡಿಸುವುದಕ್ಕಿಂತ ಫೀಲ್ಡರ್ಗಳನ್ನು ಯಾಮಾರಿಸಿ ಬೌಂಡರಿ ಗಳಿಸಿಯೇ ರನ್ ಶಿಖರ ಕಟ್ಟುತ್ತಾರೆ. ಅತ್ಯಧಿಕ ಬೌಂಡರಿ ಬಾರಿಸಿದವರ ಪಟ್ಟಿಯಲ್ಲಿ ಸದ್ಯ ನಂ.1 ಸ್ಥಾನದಲ್ಲಿರುವ ಐರ್ಲೆಂಡ್ನ ಪೌಲ್ ಸ್ಟಿರ್ಲಿಂಗ್ 344 ಸಲ ಗೆರೆ ದಾಟಿಸಿದ್ದರೆ, ರೋಹಿತ್ ಶರ್ಮಾ 337 ಬಾರಿ ಬೌಂಡರಿ ಗಳಿಸಿದ್ದಾರೆ.
ಇನ್ನು ವಿರಾಟ್ ಕೊಹ್ಲಿ 331 ಬಾರಿ ಬೌಂಡರಿ ಗೆರೆಗೆ ಬಾಲ್ ನುಸುಳಿಸಿದ್ದಾರೆ. ಮೊದಲ ಸ್ಥಾನದಲ್ಲಿರುವ ಐರ್ಲೆಂಡ್ ಆಟಗಾರನಿಗಿಂತ 13 ಬೌಂಡರಿಗಳಿಂದ ಹಿಂದಿದ್ದಾರೆ. ಒಂದೆರಡು ಪಂದ್ಯಗಳಲ್ಲಿ ವಿರಾಟ್ ಬ್ಯಾಟ್ ಮಾತನಾಡಿದರೆ, ಈ ದಾಖಲೆ ಪುಡಿಗಟ್ಟುವುದು ಖಂಡಿತ.
3. ಮುರಿಯುತ್ತಾ ರನ್ ಸರಾಸರಿ ದಾಖಲೆ.. ಆಸ್ಟ್ರೇಲಿಯಾ ಪಿಚ್ಗಳಲ್ಲಿ ಬ್ಯಾಟ್ ಬೀಸುವುದು ಅಷ್ಟು ಸುಲಭದ ಕೆಲಸವಲ್ಲ. ಕೆಲವೇ ಆಟಗಾರರು ಮಾತ್ರ ಇಲ್ಲಿ ಸಕ್ಸಸ್ ಕಂಡಿದ್ದಾರೆ. ಅದರಲ್ಲಿ ವಿರಾಟ್ ಕೊಹ್ಲಿ ಕೂಡ ಒಬ್ಬರಾಗಿದ್ದಾರೆ. ವಿರಾಟ್ ಈವರೆಗೂ ಆಸೀಸ್ ನೆಲದಲ್ಲಿ 11 ಟಿ20 ಪಂದ್ಯಗಳನ್ನು ಆಡಿದ್ದು 451 ರನ್ ಗಳಿಸಿದ್ದಾರೆ. ಇವರ ಸ್ಟ್ರೈಕ್ ರೇಟ್ 64.42 ಆಗಿದೆ.
ಇವರಷ್ಟೇ ಪಾಕಿಸ್ತಾನದ ಇಫ್ತಿಕರ್ ಅಹ್ಮದ್, ಶ್ರೀಲಂಕಾದ ಅಸೆಲಾ ಗುಣರತ್ನೆ ಮತ್ತು ದಕ್ಷಿಣ ಆಫ್ರಿಕಾದ ಜೆಪಿ ಡುಮಿನಿ ಸರಾಸರಿ ಹೊಂದಿದ್ದಾರೆ. ಈ ಬಾರಿಯ ವಿಶ್ವಕಪ್ನಲ್ಲಿ ಜೆಪಿ ಡುಮಿನಿ ಆಡುತ್ತಿಲ್ಲವಾದ್ದರಿಂದ, ಭರ್ಜರಿ ಫಾರ್ಮ್ನಲ್ಲಿರುವ ಕಾರಣ ಈ ದಾಖಲೆ ಉಡೀಸ್ ಮಾಡುವ ಅವಕಾಶ ವಿರಾಟ್ಗಿದೆ.