ಮೌಂಟ್ ಮೌಂಗನ್ಯುಯಿ: ಇಲ್ಲಿನ ಬೇ ಓವಲ್ ಮೈದಾನದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರು ಪಂದ್ಯಗಳ ಸರಣಿಯ ಎರಡನೇ ಟಿ20 ಪಂದ್ಯವು ಇಂದು ನಡೆಯಲಿದೆ. ಈಗಾಗಲೇ ಮೊದಲ ಟಿ20 ಪಂದ್ಯ ಮಳೆಗೆ ಆಹುತಿಯಾಗಿದೆ. ಇಂದೂ ಸಹ ವರುಣನ ಆರ್ಭಟದ ಭೀತಿ ಇದೆ.
ನಾಯಕ ಹಾರ್ದಿಕ್ ಪಾಂಡ್ಯ ಹಾಗೂ ತಂಡವು ಈಗಾಗಲೇ ಮೌಂಟ್ ಮೌಂಗನ್ಯುಯಿಯಲ್ಲಿ ಕಠಿಣ ತಾಲೀಮು ನಡೆಸಿದೆ. ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯದ ವೇಗಿ ಉಮ್ರಾನ್ ಮಲಿಕ್ ಇಂದು 11ರ ಬಳಗದಲ್ಲಿ ಕಾಣಿಸಿಕೊಳ್ಳಬಹುದು ಎಂಬ ಮಾತುಗಳು ಕೇಳಿಬಂದಿವೆ. ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಆತಿಥೇಯರಿಗೆ ಕಠಿಣ ಪೈಪೋಟಿ ನೀಡಲು ಟೀಂ ಇಂಡಿಯಾದ ಯುವಕರು ಬ್ಯಾಟ್ ಝಳಪಿಸಬೇಕಿದೆ.
ಯುವಪಡೆಯೊಂದಿಗೆ ಕಣಕ್ಕಿಳಿಯಲಿರುವ ಹಾರ್ದಿಕ್ ಎದುರು ಹಲವು ಸವಾಲುಗಳಿವೆ. ಅಗ್ರ ಕ್ರಮಾಂಕದಲ್ಲಿ ಯಾರು ಕಣಕ್ಕಿಳಿಯಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ. ಇಶಾನ್ ಕಿಶನ್ ಅಥವಾ ರಿಷಭ್ ಪಂತ್ ಅವರಲ್ಲಿ ಯಾರು ಶುಭ್‌ಮನ್ ಗಿಲ್ ಜೊತೆಯಲ್ಲಿ ಇನ್ನಿಂಗ್ಸ್ ಆರಂಭಿಸಲಿದ್ದಾರೆ ಎಂಬುದರತ್ತ ಎಲ್ಲರ ಗಮನವಿದೆ. ತಂಡದ 11ರ ಬಳಗ ಹೇಗಿರಲಿದೆ ಎಂಬ ಮಾಹಿತಿ ಟಾಸ್ ಸಂದರ್ಭದಲ್ಲೇ ಹೊರಬೀಳಲಿದೆ.
ಇನ್ನೊಂದೆಡೆ, ವಿಶ್ವಕಪ್ ಸೆಮಿಫೈನಲ್ನಲ್ಲಿ ಸೋತು ಹೊರಬಿದ್ದ ನ್ಯೂಜಿಲೆಂಡ್ ತಂಡಕ್ಕೆ ಕೇನ್ ವಿಲಿಯಮ್ಸನ್ ಅವರೇ ನಾಯಕರಾಗಿದ್ದಾರೆ. ಮಾರ್ಟಿನ್ ಗಫ್ಟಿಲ್ ಹಾಗೂ ವೇಗಿ ಟ್ರೆಂಟ್ ಬೌಲ್ಟ್ ಅವರನ್ನು ತಂಡದಿಂದ ಕೈಬಿಡಲಾಗಿದ್ದು, ಕೆಲ ಹೊಸಮುಖಗಳಿಗೆ ಅವಕಾಶ ಒದಗಿಬಂದಿದೆ.
ಮಳೆ ಎಚ್ಚರಿಕೆ: ನ್ಯೂಜಿಲೆಂಡ್ ಸ್ಥಳೀಯ ಹವಾಮಾನ ಇಲಾಖೆ ಪ್ರಕಾರ, ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆ ಹೆಚ್ಚಾಗಿದೆ. ಮಳೆ ಸಾಧ್ಯತೆಯು ಶೇ. 50ಕ್ಕಿಂತ ಜಾಸ್ತಿ ಇದೆ. ಹವಾಮಾನವು ಆರ್ದ್ರವಾಗಿರಲಿದೆ. ಪಂದ್ಯದ ಆರಂಭದಲ್ಲಿ ತಾಪಮಾನವು ಸುಮಾರು 17 ಡಿಗ್ರಿಗಳಷ್ಟು ಇರಲಿದ್ದು, ಕೊನೆಗೆ 15 ಡಿಗ್ರಿ ಸೆಲ್ಸಿಯಸ್ಗೆ ಇಳಿಯಬಹುದು ಎಂದು ತಿಳಿಸಿದೆ. ಇಂದಿನ ಪಂದ್ಯಕ್ಕಾದರೂ ಮಳೆ ಅಡ್ಡಿಯಾಗದಿರಲಿ ಎಂಬುದು ಕ್ರಿಕೆಟ್ ಪ್ರಿಯರ ಆಶಯವಾಗಿದೆ.
ಪಂದ್ಯದಲ್ಲಿ ಟಾಸ್ ಮಹತ್ವದ ಪಾತ್ರ ವಹಿಸಲಿದೆ. ಟಾಸ್ ಗೆದ್ದ ತಂಡವು ಹವಾಮಾನ ಪರಿಗಣಿಸಿ ಬೌಲಿಂಗ್ ಆಯ್ಕೆ ಮಾಡಬಹುದು. ಆದರೆ ಇಲ್ಲಿ 9 ಟಿ20 ಪಂದ್ಯಗಳು ನಡೆದಿದ್ದು, 7ರಲ್ಲಿ ಮೊದಲು ಬ್ಯಾಟ್ ಮಾಡಿದ ತಂಡ ಗೆಲುವಿನ ನಗೆ ಬೀರಿದೆ. 2 ಪಂದ್ಯಗಳು ಯಾವುದೇ ಫಲಿತಾಂಶವಿಲ್ಲದೆ ರದ್ದಾಗಿವೆ. ಬೇ ಓವಲ್ ಬ್ಯಾಟಿಂಗ್ ಸ್ನೇಹಿ ಪಿಚ್ ಎಂದೇ ಪರಿಗಣಿತವಾಗಿದೆ.
ಭಾರತ ತಂಡ: ಶುಭಮನ್ ಗಿಲ್, ಇಶಾನ್ ಕಿಶನ್, ಸಂಜು ಸ್ಯಾಮ್ಸನ್, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ(ನಾಯಕ), ರಿಷಭ್ ಪಂತ್(ವಿ.ಕೀ), ದೀಪಕ್ ಹೂಡಾ, ಭುವನೇಶ್ವರ್ ಕುಮಾರ್, ಯುಜುವೇಂದ್ರ ಚಾಹಲ್, ಅರ್ಷ್‌ದೀಪ್ ಸಿಂಗ್, ಉಮ್ರಾನ್ ಮಲಿಕ್, ವಾಷಿಂಗ್ಟನ್ ಸುಂದರ್, ಮೊಹಮ್ಮದ್ ಸಿರಾಜ್, ಶ್ರೇಯಸ್ ಯಾದವ್, ಕುಲದೀಪ್ ಯಾದವ್, ಹರ್ಷಲ್ ಪಟೇಲ್
ನ್ಯೂಜಿಲೆಂಡ್ ತಂಡ: ಫಿನ್ ಅಲೆನ್, ಡೆವೊನ್ ಕಾನ್ವೆ(ವಿ.ಕೀ), ಕೇನ್ ವಿಲಿಯಮ್ಸನ್(ನಾಯಕ), ಗ್ಲೆನ್ ಫಿಲಿಪ್ಸ್, ಡೇರ್ಲ್ ಮಿಚೆಲ್, ಜೇಮ್ಸ್ ನೀಶಮ್, ಮಿಚೆಲ್ ಸ್ಯಾಂಟ್ನರ್, ಟಿಮ್ ಸೌಥಿ, ಆಡಮ್ ಮಿಲ್ನೆ, ಲಾಕಿ ಫರ್ಗುಸನ್, ಬ್ಲೇರ್ ಟಿಕ್ನರ್, ಮೈಕಲ್ ಬ್ರೇಸ್‌ವೆಲ್, ಇಶ್ ಸೋಧಿ
ಪಂದ್ಯದ ಆರಂಭ: ಮಧ್ಯಾಹ್ನ 12 ಗಂಟೆ(ಭಾರತೀಯ ಕಾಲಮಾನ)
ಸ್ಥಳ: ಬೇ ಓವಲ್ ಮೈದಾನ, ಮೌಂಟ್ ಮೌಂಗನ್ಯುಯಿ
ಇದನ್ನೂ ಓದಿ: ಇಂಗ್ಲೆಂಡ್ ಏಕದಿನ ವಿಶ್ವಕಪ್ ಗೆದ್ದು ವೈಟ್ ಬಾಲ್ನಲ್ಲೂ ಶ್ರೇಷ್ಠ ತಂಡ ಎಂದು ಸಾಬೀತು ಪಡಿಸಬೇಕಿದೆ: ಮಾರ್ಗನ್