ಕೋಲ್ಕತ್ತಾ: ನಾಗಲ್ಯಾಂಡ್ ವಿರುದ್ಧ ನಡೆಯುತ್ತಿರುವ ರಣಜಿ ಟ್ರೋಫಿಯ ಫ್ರೀ ಕ್ವಾರ್ಟರ್ ಫೈನಲ್ನಲ್ಲಿ ಜಾರ್ಖಂಡ್ ತಂಡದ ಯುವ ಬ್ಯಾಟರ್ ಕುಮಾರ್ ಕುಶಾಗ್ರ 266 ರನ್ ಸಿಡಿಸುವ ಮೂಲಕ, ಪ್ರಥಮ ದರ್ಜೆ ಕ್ರಿಕೆಟ್ ಇತಿಹಾಸದಲ್ಲಿ 250+ ರನ್ ಸಿಡಿಸಿ ಅತ್ಯಂತ ಕಿರಿಯ ಬ್ಯಾಟರ್ ಎಂಬ ವಿಶ್ವದಾಖಲೆಗೆ ಪಾತ್ರರಾಗಿದ್ದಾರೆ.
6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿದಿದ್ದ ಕುಶಾಗ್ರ 270 ಎಸೆತಗಳಲ್ಲಿ 37 ಬೌಂಡರಿ ಮತ್ತು 2 ಸಿಕ್ಸರ್ಗಳ ನೆರವಿನಿಂದ 266 ರನ್ಗಳಿಸಿದರು. ಕುಶಾಗ್ರ ತಮ್ಮ 17 ವರ್ಷ 141 ದಿನಗಳಲ್ಲಿ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 250ರ ಗಡಿ ದಾಟುವ ಮೂಲಕ, ಈ ಸಾಧನೆ ಮಾಡಿದ ವಿಶ್ವದ ಕಿರಿಯ ಬ್ಯಾಟರ್ ಎನಿಸಿಕೊಂಡರು.
ಈ ಮೊದಲು ಪಾಕಿಸ್ತಾನದ ಲೆಜೆಂಡರಿ ಬ್ಯಾಟರ್ ಜಾವೇದ್ ಮಿಯಾಂದಾದ್ ಈ ವಿಶ್ವದಾಖಲೆಗೆ ಪಾತ್ರರಾಗಿದ್ದರು. ಅವರು ಪಾಕಿಸ್ತಾನ ಡೊಮೆಸ್ಟಿಕ್ ಕ್ರಿಕೆಟ್ನಲ್ಲಿ 17 ವರ್ಷ, 311ದಿನಗಳ ಲ್ಲಿ ಈ ಸಾಧನೆ ಮಾಡಿದ್ದರು. 3ನೇ ಸ್ಥಾನದಲ್ಲಿ ಜಾರ್ಖಂಡ್ನವರೇ ಆದ ಇಶಾನ್ ಕಿಶನ್ ಅವರು ತಮ್ಮ 18 ವರ್ಷ, 111 ದಿನಗಳಿದ್ದಾಗ 6ನೇ ಕ್ರಮಾಂಕದಲ್ಲೇ ಬ್ಯಾಟಿಂಗ್ ಮಾಡಿ 250+ ರನ್ಗಳಿಸಿದ್ದರು.
ಇನ್ನು ದ್ವಿಶತಕ ಸಿಡಿಸಿದ ಭಾರತದ ಕಿರಿಯ ಬ್ಯಾಟರ್ ಪಟ್ಟಿಯಲ್ಲಿಯೂ ಕುಶಾಗ್ರ 3ನೇ ಸ್ಥಾನದಲ್ಲಿದ್ದಾರೆ. ಮೊದಲ ಸ್ಥಾನದಲ್ಲಿ ರೀತಿಂದರ್ ಸಿಂಗ್(17 ವರ್ಷ 17 ದಿನ), 2ನೇ ಸ್ಥಾನದಲ್ಲಿ ಅಂಬಾಟಿ ರಾಯುಡು(17 ವರ್ಷ, 55 ದಿನ) ಮೊದಲೆರಡು ಸ್ಥಾನದಲ್ಲಿದ್ದಾರೆ.
ಇನ್ನು ಈ ಪಂದ್ಯದಲ್ಲಿ, ಟಾಸ್ ಸೋತು ಬ್ಯಾಟಿಂಗ್ ಇಳಿದಿರುವ ಜಾರ್ಖಂಡ್ 177 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 769 ರನ್ಗಳಿಸಿ 3ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದಿರಿಸಿಕೊಂಡಿದೆ. ಕುಶಾಗ್ರ 266, ಶಬಾಜ್ ನದೀಮ್ 123, ವಿರಾಟ್ ಸಿಂಗ್ 107ರನ್ಗಳಿಸಿದ್ದಾರೆ.
ಇದನ್ನೂ ಓದಿ:2 ದಿನ ಬ್ಯಾಟಿಂಗ್, 505ರನ್ಗಳಿಸಿದರೂ ಡಿಕ್ಲೇರ್ ಘೋಷಿಸದ ಆಸ್ಟ್ರೇಲಿಯಾ... ಪಾಕ್ ಬೌಲರ್ಸ್ ಕಂಗಾಲು