ಹೈದರಾಬಾದ್: ಹಾಲಿ ವಿಶ್ವ ಚಾಂಪಿಯನ್ ಮತ್ತು ಒಲಿಂಪಿಕ್ ಪದಕ ವಿಜೇತೆ ಪಿವಿ ಸಿಂಧು ಅವರ ಬ್ಯಾಡ್ಮಿಂಟನ್ ಅಕಾಡೆಮಿಗಾಗಿ ಆಂಧ್ರ ಸರ್ಕಾರ ಎರಡು ಎಕರೆ ಸ್ಥಳವನ್ನು ಮಂಜೂರು ಮಾಡಿದೆ. ವಿಶಾಖಪಟ್ಟಣದ ಚಿನಗಾಡಿಲಿ ಎಂಬಲ್ಲಿ ಸ್ಥಳ ನಿಗದಿ ಮಾಡಿದೆ.
ಭಾರತದ ಪರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸುವ ಪಿವಿ ಸಿಂಧು ಅಕಾಡೆಮಿಗೆ ಕ್ರೀಡೆಯನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಎರಡು ಎಕರೆ ಸ್ಥಳವನ್ನು ಉಚಿತವಾಗಿ ನೀಡಿದೆ. ಸರ್ವೆ ಸಂಖ್ಯೆ 72 ಮತ್ತು 83 ರಲ್ಲಿ 2 ಎಕರೆಗಳನ್ನು ಅಕಾಡೆಮಿಗೆ ನೀಡಲಾಗಿದೆ ಎಂದು ಸರ್ಕಾರ ಬಹಿರಂಗಪಡಿಸಿದೆ.
ಎರಡು ಎಕರೆ ಜಮೀನಿನ ಜೊತೆಗೆ ಸಿಂಧು ಅಕಾಡೆಮಿಗಾಗಿ 5 ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ ಎಂದು ಸರ್ಕಾರ ತಿಳಿಸಿದೆ. ಈ ಬ್ಯಾಡ್ಮಿಂಟನ್ ಅಕಾಡೆಮಿ ನಿರ್ಮಾಣವು ಎರಡು ಹಂತಗಳಲ್ಲಿ ನಡೆಯಲಿದೆ. ಬಡಮಕ್ಕಳಲ್ಲಿ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕೆಂದು ಆಂಧ್ರ ಸರ್ಕಾರ ಸೂಚನೆ ನೀಡಿದೆ.
ಪಿವಿ ಸಿಂಧು ಬ್ಯಾಡ್ಮಿಂಟನ್ ಅಕಾಡೆಮಿಗೆ ಕ್ರೀಡಾ ಮತ್ತು ಯುವ ವ್ಯವಹಾರಗಳ ಇಲಾಖೆ ಎರಡು ಎಕರೆಗಳನ್ನು ದಾನ ನೀಡಿದೆ. ಅಕಾಡೆಮಿ ನೋಂದಣಿ ಪ್ರಮಾಣ ಪತ್ರ ಮತ್ತು ಐಟಿ ರಿಟರ್ನ್ಸ್ ಅನ್ನು ಮೂರು ವರ್ಷಗಳ ಅವಧಿಗೆ ಸಲ್ಲಿಸಿದ ನಂತರ ಮತ್ತು ನಿಯಮಗಳ ಪ್ರಕಾರ ಇತರ ಎಲ್ಲ ಷರತ್ತುಗಳನ್ನು ಪೂರೈಸಿದ ನಂತರ ಈ ಭೂಮಿಯನ್ನು ಪಿವಿ ಸಿಂಧು ಬ್ಯಾಡ್ಮಿಂಟನ್ ಅಕಾಡೆಮಿಗೆ ವರ್ಗಾಯಿಸಲಾಗಿದೆ ಎಂದು ಸರ್ಕಾರ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನು ಓದಿ:ವಿಶ್ವಕಪ್ ಎಂದಿಗೂ ಗ್ರೇಟ್, WTC ಯನ್ನು ವೈಭವೀಕರಿಸುವ ಅಗತ್ಯವಿಲ್ಲ: ಗಂಭೀರ್