ಮ್ಯಾಡ್ರಿಡ್ (ಸ್ಪೇನ್): ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕೆ ಮೊದಲ ಪದಕ ಖಚಿತವಾಗಿದೆ. ಹುಯೆಲ್ಲಾದಲ್ಲಿ ನಡೆದ ಮಾರ್ಕ್ ಕಾಲ್ಜೋವ್ ವಿರುದ್ಧದ ಪಂದ್ಯದಲ್ಲಿ ಕಿಡಂಬಿ ಶ್ರೀಕಾಂತ್ ಜಯಗಳಿಸಿ ಸೆಮಿಫೈನಲ್ ತಲುಪಿದ್ದಾರೆ.
ಕೇವಲ 26 ನಿಮಿಷಗಳ ಕಾಲ ನಡೆದ ಸ್ಪರ್ಧೆಯಲ್ಲಿ ಡಚ್ ಷಟ್ಲರ್ ಕಾಲ್ಜೋವ್ ಅನ್ನು 21-8, 21-7 ನೇರ ಸೆಟ್ಗಳ ಅಂತರದಿಂದ ಸೋಲಿಸಿದರು. ಈ ಗೆಲುವಿನೊಂದಿಗೆ, ಕಿಡಂಬಿ ಶ್ರೀಕಾಂತ್ 2021ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಮೊದಲ ಪದಕವನ್ನು ಮತ್ತು ಅವರ ಮೊದಲ ವಿಶ್ವ ಚಾಂಪಿಯನ್‌ಶಿಪ್ ಪದಕ ಖಚಿತಪಡಿಸಿದ್ದಾರೆ. ಇದು ಪುರುಷರ ಸಿಂಗಲ್ಸ್‌ನಲ್ಲಿ ವಿಶ್ವದಲ್ಲಿ ಭಾರತಕ್ಕೆ ಮೂರನೇ ಪದಕವಾಗಿದೆ.
ಇದಕ್ಕೂ ಮುನ್ನ ಹಾಲಿ ಚಾಂಪಿಯನ್ ಪಿವಿ ಸಿಂಧು ಕ್ವಾರ್ಟರ್ ಫೈನಲ್‌ನಲ್ಲಿ ತೈ ತ್ಸು ಯಿಂಗ್ ವಿರುದ್ಧ ನೇರ ಸೆಟ್‌ಗಳಿಂದ ಸೋಲು ಅನುಭವಿಸಿ ಪಂದ್ಯಾವಳಿಯಿಂದ ಹೊರಬಿದ್ದರು. 42 ನಿಮಿಷಗಳ ಕಾಲ ನಡೆದ ಹಣಾಹಣಿಯಲ್ಲಿ ತೈ ತ್ಸು ಯಿಂಗ್ 21-17, 21-13 ಸೆಟ್‌ಗಳಿಂದ ಭಾರತದ ಶಟ್ಲರ್‌ರನ್ನು ಸೋಲಿಸಿ ಸೆಮಿಫೈನಲ್ ಪ್ರವೇಶಿಸಿದರು. ಇದು ಪಿವಿ ಸಿಂಧು ಮತ್ತು ಟಿಟಿವೈ ನಡುವಿನ 20ನೇ ಮುಖಾಮುಖಿಯಾಗಿತ್ತು.
ಪುರುಷರ ವಿಭಾಗದಲ್ಲಿ ಇದಕ್ಕೂ ಮೊದಲು 1983ರಲ್ಲಿ ಪ್ರಕಾಶ್ ಪಡುಕೋಣೆ ಹಾಗೂ 2019ರಲ್ಲಿ ಸಾಯಿ ಪ್ರಣೀತ್ ಭಾರತ ಪರವಾಗಿ ಪದಕ ಗೆದ್ದಿದ್ದರು. ಇದೀಗ ಕಿಡಂಬಿ ಶ್ರೀಕಾಂತ್ ಸೆಮಿಫೈನಲ್ ತಲುಪಿದ್ದು, ಮೊದಲ ಪದಕ ಖಚಿತವಾಗಿದೆ.
ಇದನ್ನೂ ಓದಿ: Commonwealth Championship 2021 : ಬಂಗಾರ ಗೆದ್ದು ಎಂಟು ರಾಷ್ಟ್ರೀಯ ದಾಖಲೆ ನಿರ್ಮಿಸಿದ ಪೂರ್ಣಿಮಾ!