ಸಿಂಗಾಪುರ್: ಟೂರ್ನಮೆಂಟ್ ಸಂಘಟಕರಾದ ಸಿಂಗಾಪುರ್ ಬ್ಯಾಡ್ಮಿಂಟನ್ ಅಸೋಸಿಯೇಷನ್ ಮತ್ತು ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್ (ಬಿಡಬ್ಲ್ಯುಎಫ್) ಬುಧವಾ ಸಿಂಗಾಪುರ್ ಓಪನ್ 2021 ಅನ್ನು ರದ್ದುಗೊಳಿಸಿರುವುದಾಗಿ ಘೋಷಿಸಿವೆ.
ವಿಶ್ವದಾದ್ಯಂತ ಕೋವಿಡ್ 19 ಎರಡನೇ ಅಲೆ ಹೆಚ್ಚಾಗುತ್ತಿರುವುದರಿಂದ ಟೂರ್ನಿಯನ್ನು ರದ್ದುಗೊಳಿಸಲು ತೀರ್ಮಾನಿಸಿರವುದಾಗಿ ಬಿಡಬ್ಲ್ಯುಎಫ್ ಮತ್ತು ಸಿಂಗಾಪುರ ಬ್ಯಾಡ್ಮಿಂಟನ್ ಅಸೋಸಿಯೇಷನ್ ಜಂಟಿಯಾಗಿ ತಿಳಿಸಿವೆ. ಆದರೆ, ಈ ನಿರ್ಧಾರದಿಂದಾಗಿ ಒಲಿಂಪಿಕ್ಸ್ ಪ್ರವೇಶಿಸಿಲು ಕೊನೆಯ ಅವಕಾಶ ಎದುರು ನೋಡುತ್ತಿದ್ದ ಭಾರತದ ಸೈನಾ ನೆಹ್ವಾಲ್ ಮತ್ತು ಕಿಡಂಬಿ ಶ್ರೀಕಾಂತ್ಗೆ ಭಾರಿ ನಿರಾಸೆಯಾಗಿದೆ.
"ಪಂದ್ಯಾವಳಿಗೆ ಭಾಗವಹಿಸುವ ಎಲ್ಲರಿಗೂ ಸುರಕ್ಷಿತ ವಾತಾವರಣವನ್ನು ಒದಗಿಸಲು ಸಂಘಟಕರು ಮತ್ತು ಬಿಡಬ್ಲ್ಯೂಎಫ್ ಎಲ್ಲ ಪ್ರಯತ್ನಗಳನ್ನು ಮಾಡಿದೆ. ಆದಾಗ್ಯೂ, ಜಾಗತಿಕವಾಗಿ ಕೋವಿಡ್ 19 ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಪ್ರಯಾಣ ನಿರ್ಬಂಧಕ್ಕೆ ಸರ್ಕಾರಗಳು ಮುಂದಾಗಿವೆ. ಎಲ್ಲ ಆಟಗಾರರು, ಟೂರ್ನಿಯ ಅಧಿಕಾರಿಗಳು ಮತ್ತು ಸಿಬ್ಬಂದಿ, ಸ್ಥಳೀಯ ಜನರ ಆರೋಗ್ಯ ಮತ್ತು ಸುರಕ್ಷತೆಯ ದೃಷ್ಟಿಯಿಂದ ಟೂರ್ನಿಯನ್ನು ನಡೆಸದೇ ಇರಲು ನಿರ್ಧರಿಸಲಾಗಿದೆ ಎಂದು ಬಿಡಬ್ಲ್ಯುಎಫ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಸೈನಾ ನೆಹ್ವಾಲ್ ಮತ್ತು ಕಿಡಿಂಬಿ ಶ್ರೀಕಾಂತ್ಗೆ ಒಲಿಂಪಿಕ್ಸ್ಗೆ ಅರ್ಹತೆ ಗಿಟ್ಟಿಸಿಕೊಳ್ಳಲು ಇದೇ ಕೊನೆಯ ಟೂರ್ನಿಯಾಗಿತ್ತು. ಇದರಲ್ಲಿ ಕನಿಷ್ಠ ಪಕ್ಷ ಫೈನಲ್ ತಲುಪಿದ್ದರೆ ಇವರಿಬ್ಬರಿಗೂ ಟೋಕಿಯೋ ಒಲಿಂಪಿಕ್ಗೆ ಅರ್ಹರಾಗುತ್ತಿದ್ದರು. ಇದೀಗ ಇವರಿಬ್ಬರ ಕನಸು ಬಹುತೇಕ ಕಮರಿದೆ.
ಈಗಾಗಲೆ ಭಾರತ ಸ್ಟಾರ್ ಶಟ್ಲರ್ ಪಿ.ವಿ.ಸಿಂಧು, ಬಿ.ಸಾಯಿ ಪ್ರಣೀತ್ ಸಿಂಗಲ್ಸ್ ವಿಭಾಗದಲ್ಲಿ ಮತ್ತು ಚಿರಾಗ್ ಶೆಟ್ಟಿ ಮತ್ತು ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಪುರುಷರ ಡಬಲ್ಸ್ನಲ್ಲಿ ಅರ್ಹತೆ ಪಡೆದುಕೊಂಡಿದ್ದಾರೆ.
ಇದನ್ನು ಓದಿ: 5 ಕೋಟಿ ರೂ.ದೇಣಿಗೆ ನೀಡಿದ ಎಂಪಿಎಲ್: 7 ಕೋಟಿಯಿದ್ದ ನಿಧಿ ಸಂಗ್ರಹ ಗುರಿ 11ಕ್ಕೆ ಏರಿಸಿಕೊಂಡ ವಿರುಷ್ಕಾ ದಂಪತಿ