ಕ್ವಾಲಾಲಂಪುರ್: ಭಾರತದ ಹಿರಿಯ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಮಲೇಷ್ಯನ್ ಮಾಸ್ಟರ್ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನಲ್ಲಿ ಕ್ವಾರ್ಟರ್ಫೈನಲ್ ಪ್ರವೇಶಿಸಿದ್ದಾರೆ.
ಸೈನಾ ಗುರುವಾರ ನಡೆದ ಎರಡನೇ ಸುತ್ತಿನ ಪಂದ್ಯದಲ್ಲಿ ದಕ್ಷಿಣ ಕೊರಿಯಾದ ಶಟ್ಲರ್ ಆ್ಯನ್ ಶೆ ಯಂಗ್ ಅವರನ್ನು 25-23, 21-12 ರ ನೇರ ಗೇಮ್ಗಳ ಅಂತರದಿಂದ ಗೆಲುವು ಸಾಧಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು. ಸೈನಾ ಈ ಪಂದ್ಯವನ್ನು 39 ನಿಮಿಷಗಳಲ್ಲಿ ಗೆದ್ದುಕೊಂಡರು.
ಮೊದಲ ಗೇಮ್ನಲ್ಲಿ ಇಬ್ಬರು ಆಟಗಾರ್ತಿಯರು ಉತ್ತಮ ಪೈಪೋಟಿ ಕಂಡುಬಂದಿತು. ಆದರೆ 25-23 ರಿಂದ ಸೈನಾ ಮೊದಲ ಗೇಮ್ ತಮ್ಮದಾಗಿಸಿಕೊಂಡರು. ಎರಡನೇ ಗೇಮ್ನಲ್ಲಿ ಸೈನಾ ಕೊರಿಯನ್ ಆಟಗಾರ್ತಿಯ ವಿರುದ್ಧ ಸಂಪೂರ್ಣ ಹಿಡಿತ ಸಾಧಿಸಿ 21-12ರಲ್ಲಿ ಸುಲಭವಾಗಿ ಪಂದ್ಯ ಗೆದ್ದುಕೊಂಡರು.
ಕೊರಿಯನ್ ಆಟಗಾರ್ತಿ ವಿರುದ್ಧ ಇದು ಸೈನಾಗೆ ಸಿಕ್ಕ ಮೊದಲ ಗೆಲುವಾಗಿದೆ. ಕಳೆದ ವರ್ಷ ಫ್ರೆಂಚ್ ಓಪನ್ ಕ್ವಾರ್ಟರ್ ಫೈನಲ್ನಲ್ಲಿ ಸೈನಾ ಸೋಲುಕಂಡಿದ್ದರು.
ಸೋಮವಾರ ಸೈನಾ ಬೆಲ್ಜಿಯಂನ ಲಿಯಾನ್ನೆ ತಾನ್ ರನ್ನು ತಮ್ಮ ಮೊದಲ ಸುತ್ತಿನ ಪಂದ್ಯದಲ್ಲಿ ಮಣಿಸಿದ್ದರು. 2 ಬಾರಿಯ ಕಾಮನ್ವೆಲ್ತ್ ಚಾಂಪಿಯನ್ ಮುಂದಿನ ಸುತ್ತಿನಲ್ಲಿ ಒಲಿಂಪಿಕ್ ಚಾಂಪಿಯನ್ ಸ್ಪೇನಿನ ಕರೋಲಿನ ಮರಿನ್ ಅವರನ್ನು ಎದುರಿಸಲಿದ್ದಾರೆ.
ಪುರುಷರ ವಿಭಾಗದಲ್ಲಿ ಪುರಪಳ್ಳಿ ಕಶ್ಯಪ್, ಸಾಯಿ ಪ್ರಣೀತ್, ಕಿಡಂಬಿ ಶ್ರೀಕಾಂತ್ ಮೊದಲ ಸುತ್ತಿನಲ್ಲಿ ಸೋಲನುಭವಿಸಿ ಹೊರಬಿದ್ದಿದ್ದಾರೆ. ಪಿ ವಿ ಸಿಂದು, ಪ್ರಣಯ್ ರಾಯ್, ಸಮೀರ್ ವರ್ಮಾ ಎರಡನೇ ಸುತ್ತು ಪ್ರವೇಶಿಸಿದ್ದಾರೆ.