ನವದೆಹಲಿ: ಭಾರತದ ಬ್ಯಾಡ್ಮಿಂಟನ್ ಸ್ಟಾರ್, ರಿಯೋ ಒಲಿಂಪಿಕ್ನಲ್ಲಿ ಬೆಳ್ಳಿ ಪದಕ ವಿಜೇತೆಯಾಗಿದ್ದ ಪಿ.ವಿ. ಸಿಂಧು ಟೋಕಿಯೋ ಒಲಿಂಪಿಕ್ನಲ್ಲಿ ತ್ರಿವರ್ಣ ಧ್ವಜ ಹಿಡಿದು ಭಾರತದ ಕ್ರೀಡಾಪಟುಗಳನ್ನು ಮುನ್ನಡೆಸುವ ಅವಕಾಶ ಗಿಟ್ಟಿಸಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ.
ಟೋಕಿಯೋ ಒಲಿಂಪಿಕ್ ಜುಲೈ 23ರಂದು ಆರಂಭವಾಗಲಿದ್ದು, ಇದೇ ಮೊದಲ ಬಾರಿಗೆ ಓರ್ವ ಪುರುಷ ಮತ್ತು ಮಹಿಳಾ ಅಥ್ಲಿಟ್ ಧ್ವಜ ಹಿಡಿದು ಭಾರತದ ಕ್ರೀಡಾಪಟುಗಳನ್ನು ಮುನ್ನಡೆಸಲಿದ್ದಾರೆ.
ಅಧಿಕೃತ ಪ್ರಕಟಣೆ ಇದೇ ತಿಂಗಳ ಕೊನೆಯಲ್ಲಿ ಘೋಷಣೆಯಾಗಲಿದ್ದು, ಪಿ.ವಿ. ಸಿಂಧು ಧ್ವಜ ಹಿಡಿದು ಭಾರತೀಯ ಕ್ರೀಡಾಪಟುಗಳನ್ನು ಮುನ್ನಡೆಸುವ ಸಾಧ್ಯತೆ ದಟ್ಟವಾಗಿದೆ ಎಂದು ಉನ್ನತ ಮೂಲಗಳು ಮಾಹಿತಿ ನೀಡಿವೆ.
ಹಿಂದಿನ ಒಲಿಂಪಿಕ್ನಲ್ಲಿ ಮೆಡಲ್ ಪಡೆದ ಅಥ್ಲಿಟ್ಗಳು ಸಾಮಾನ್ಯವಾಗಿ ಮುಂದಿನ ಒಲಿಂಪಿಕ್ನಲ್ಲಿ ಧ್ವಜ ಹಿಡಿಯುವುದು ರೂಢಿಯಲ್ಲಿದೆ. ಆದರೆ ಈ ಬಗ್ಗೆ ಯಾವುದೇ ನಿಯಮವನ್ನು ರೂಪಿಸಿಲ್ಲ.
ಹಿಂದಿನ ಒಲಿಂಪಿಕ್ನಲ್ಲಿ ಸಾಕ್ಷಿ ಮಲಿಕ್ ಕೂಡಾ ಪದಕ ಗೆದ್ದಿದ್ದು, ಆದರೆ ಈ ಬಾರಿಯ ಒಲಿಂಪಿಕ್ಗೆ ಆಯ್ಕೆಯಾಗಿಲ್ಲದ ಕಾರಣ ಸಾಕ್ಷಿ ಧ್ವಜ ಹಿಡಿಯುವ ಪ್ರಮೇಯವೇ ಬರುವುದಿಲ್ಲ. ಹೀಗಾಗಿ ಪಿ.ವಿ. ಸಿಂಧು ಧ್ವಜ ಹಿಡಿಯುವುದು ಬಹುತೇಕ ಖಚಿತವಾಗಿದೆ ಎನ್ನಲಾಗ್ತಿದೆ.
ಇದನ್ನೂ ಓದಿ: ಮಾಸ್ಕ್ ಹಾಕದ ಗ್ರಾಹಕನ ಮೇಲೆ ಗುಂಡು ಹಾರಿಸಿದ ಬ್ಯಾಂಕ್ ಭದ್ರತಾ ಸಿಬ್ಬಂದಿ!
ಪುರುಷ ಅಥ್ಲಿಟ್ಗಳಲ್ಲಿ ಯಾರು ಧ್ವಜ ಹಿಡಿಯುತ್ತಾರೆ ಎಂಬುದು ಇನ್ನೂ ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ. ಆದರೆ ನೀರಜ್ ಚೋಪ್ರಾ, ಶರತ್ ಕಮಲ್, ಭಜರಂಗ್ ಪೂನಿಯಾ, ಬಾಕ್ಸರ್ ಅಮಿತ್ ಫಂಗಲ್ ಹೆಸರುಗಳು ಕೇಳಿಬರುತ್ತಿವೆ.