ಒಡೆನ್ಸ್ : ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿರುವ ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿ ವಿ ಸಿಂಧು ಎರಡು ತಿಂಗಳ ವಿರಾಮದ ಬಳಿಕ ಅಂಗಳಿಕ್ಕಿಳಿಯಲಿದ್ದಾರೆ. ಹಾಲಿ ವಿಶ್ವ ಚಾಂಪಿಯನ್ ಮಂಗಳವಾರದಿಂದ ಆರಂಭವಾಗಲಿರುವ ಡೆನ್ಮಾರ್ಕ್ ಓಪನ್ ವರ್ಲ್ಡ್ ಟೂರ್ ಸೂಪರ್ 1000 ಅವರು ಕಣಕ್ಕಿಳಿಯಲಿದ್ದಾರೆ.
ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಸತತ ಪಂದ್ಯಗಳನ್ನಾಡಿ ದಣಿದಿದ್ದ ಕಂಚಿನ ಪದಕ ವಿಜೇತೆ ಸಿಂಧು ಕೆಲ ಸಮಯ ವಿರಾಮ ಬಯಸಿದ್ದರು. ಇದೀಗ 8,50,000 ಡಾಲರ್ ಬಹುಮಾನ ಮೊತ್ತದ ಟೂರ್ನಿ ಆಗಿರುವ ಡೆನ್ಮಾರ್ಕ್ ಓಪನ್ ಮೂಲಕ ಋತುವನ್ನು ಪುನಾರಂಭ ಮಾಡುವುದಕ್ಕೆ ಸಿದ್ಧರಾಗಿದ್ದಾರೆ. ಈ ಟೂರ್ನಿ ಕೋವಿಡ್‌ನಿಂದಾಗಿ ಸ್ಥಗಿತಗೊಂಡಿತ್ತು.
ಉಬರ್ ಕಪ್ ಫೈನಲ್ ಟೂರ್ನಿಯ ವೇಳೆ ಸೊಂಟದ ನೋವಿನ ಕಾರಣ ಟೂರ್ನಿಯನ್ನು ಅರ್ಧದಲ್ಲೇ ತ್ಯಜಿಸಿದ್ದ ಸೈನಾ ನೆಹ್ವಾಲ್ ಕೂಡ ಚೇತರಿಸಿಕೊಂಡಿದ್ದಾರೆ. ಅವರೂ ಕೂಡ ಅಖಾಡಕ್ಕಿಳಿಯಲಿದ್ದಾರೆ.
ನಾಲ್ಕನೇ ಶ್ರೇಯಾಂಕ ಪಡೆದಿರುವ ಸಿಂಧು ತಮ್ಮ ಮೊದಲ ಪಂದ್ಯದಲ್ಲಿ ಟರ್ಕಿಯ ನೆಸ್ಲಿಹನ್ ಯಿಗಿತ್ ವಿರುದ್ಧ ಹಾಗೂ ಸೈನಾ, ಜಪಾನ್‌ನ ಅಯಾ ಒಹೊರಿ ವಿರುದ್ಧ ಆಡಲಿದ್ದಾರೆ. ಸಿಂಧು ಮೊದಲ ಪಂದ್ಯದಲ್ಲಿ ಗೆದ್ದರೆ 2ನೇ ಸುತ್ತಿನಲ್ಲಿ ಥಾಯ್ಲೆಂಡ್ನ ಬುಸನನ್ ಒಗ್ಬಮ್ರುಂಗ್ಫನ್ ವಿರುದ್ಧ ಸೆಣಸಬೇಕಾಗಿದೆ.
ಡಬಲ್ಸ್ನಲ್ಲಿ ಚಿರಾಗ್-ಸಾತ್ವಕ್ ಮೇಲೆ ಭರವಸೆ
ಭಾರತದ ಭರವಸೆಯ ಸ್ಟಾರ್ಗಳಾದ ಚಿರಾಗ್ ಶೆಟ್ಟಿ ಮತ್ತು ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮೇಲೆ ಎಲ್ಲರ ಗಮನವಿದೆ. 7ನೇ ಶ್ರೇಯಾಂಕದ ಈ ಜೋಡಿ ಇಂಗ್ಲಿಷ್ ಜೋಡಿ ಕಲುಂ ಹೆಮಿಂಗ್ ಮತ್ತು ಸ್ಟೀವನ್ ಸ್ಟಾಲ್‌ವುಡ್ ವಿರುದ್ಧ ತಮ್ಮ ಅಭಿಯಾನ ಆರಂಭಿಸಲಿದ್ದಾರೆ.
ಹಿರಿಯ ಶಟ್ಲರ್ಗಳಾದ ಬಿ. ಸಾಯಿ ಪ್ರಣೀತ್ ಮತ್ತು ಕಿಡಂಬಿ ಶ್ರೀಕಾಂತ್ ಮೊದಲ ಸುತ್ತಿನ ಪಂದ್ಯದಲ್ಲಿ ಪರಸ್ಪರ ಎದುರಾಗಲಿದ್ದಾರೆ. ಇವರಲ್ಲಿ ಗೆದ್ದವರು ವಿಶ್ವದ ನಂಬರ್ ಒನ್ ಕೆಂಟೊ ಮೊಮೊಟ ವಿರುದ್ಧ ಕಠಿಣ ಸವಾಲಿಗೆ ಸಿದ್ಧರಾಗಬೇಕಾಗಿದೆ.
ಇದನ್ನು ಓದಿ:ಫ್ರಾನ್ಸ್ನಲ್ಲಿ ನಡೆದ ಫೆನ್ಸಿಂಗ್ ಸ್ಪರ್ಧೆಯಲ್ಲಿ ಗೆಲುವು ಸಾಧಿಸಿದ ಭವಾನಿ ದೇವಿ