ನವದೆಹಲಿ: ಭಾರತದ ಸೂಪರ್ ಬ್ಯಾಡ್ಮಿಂಟನ್ ಜೋಡಿಯಾದ ಚಿರಾಗ್ ಶೆಟ್ಟಿ ಮತ್ತು ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮುಂಬರುವ ಥಾಮಸ್ ಮತ್ತು ಉಬರ್ ಕಪ್ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ.
ಥಾಮಸ್ ಮತ್ತು ಉಬರ್ ಕಪ್ ಅಕ್ಟೋಬರ್ 3ರಿಂದ 11ರವರೆಗೆ ಡೆನ್ಮಾರ್ಕ್‌ನಲ್ಲಿ ನಡೆಯಲಿದೆ. ಈಗಾಗಲೆ ಬಿಎಐ ಮನವಿ ಮೇರೆಗೆ ವಿಶ್ವಚಾಂಪಿಯನ್ ಪಿವಿ ಸಿಂಧು ಕಣಕ್ಕಿಳಿಯುವುದು ಖಚಿತವಾಗಿದೆ. ಆದರೆ ಭಾರತದ ಟಾಪ್ ರ್ಯಾಂಕ್ ಜೋಡಿಯಾಗಿರುವ ಸಾತ್ವಿಕ್-ಚಿರಾಗ್ ಜೋಡಿ ಟೂರ್ನಿಯಲ್ಲಿ ಭಾಗವಹಿಸದಿರಲು ನಿರ್ಧರಿಸಿದ್ದಾರೆ.
ಹೈದರಾಬಾದ್ನ ಸಾತ್ವಿಕ್ಗೆ ಕಳೆದ ವಾರ ಕೋವಿಡ್ 19 ಪರೀಕ್ಷೆಯಲ್ಲಿ ಪಾಸಿಟಿವ್ ಕಂಡುಬಂದಿತ್ತು. ತಮ್ಮ ಮನೆಯಲ್ಲೇ ಕ್ವಾರಂಟೈನ್ ಆಗಿರುವ ಅವರು ಮತ್ತೊಂದು ಕೋವಿಡ್-19 ಟೆಸ್ಟ್ ಫಲಿತಾಂಶದ ನಿರೀಕ್ಷೆಯಲ್ಲಿದ್ದಾರೆ. ಆದ್ದರಿಂದ ಮುನ್ನೆಚ್ಚರಿಕೆಯ ಕ್ರಮವಾಗಿ ಕೂಟದಿಂದ ಹಿಂದೆ ಸರಿಯಲು ನಿರ್ಧರಿಸಿರುವುದಾಗಿ ಅವರ ಜೊತೆಗಾರ ಚಿರಾಗ್ ಶೆಟ್ಟಿ ಹೇಳಿದ್ದಾರೆ.
ಸಾತ್ವಿಕ್ ಅವರ ಮುಂದಿನ ಕೋವಿಡ್ ಟೆಸ್ಟ್ ಫಲಿತಾಂಶದ ಮೇಲೆ ಎಲ್ಲ ಅವಲಂಬಿಸಿದೆ. ಮುನ್ನೆಚ್ಚರಿಕೆಯ ಕ್ರಮವಾಗಿ ನಾವು ಡೆನ್ಮಾರ್ಕ್ ಕೂಟದಿಂದ ಹೊರಗುಳಿಯಲು ನಿರ್ಧರಿಸಿದ್ದೇವೆ. ಸಾತ್ವಿಕ್ ಫಲಿತಾಂಶ ನೆಗೆಟಿವ್ ಬಂದರೆ ಸೆ. 15ರ ವೇಳೆ ನಾವು ತರಬೇತಿ ಶಿಬಿರಕ್ಕೆ ಹಾಜರಾಗುತ್ತೇವೆ ಎಂದು ಅವರು ತಿಳಿಸಿದ್ದಾರೆ.
ಬ್ಯಾಡ್ಮಿಂಟನ್ ಇತಿಹಾಸದಲ್ಲೇ ಥಾಯ್ಲೆಂಡ್ ಓಪನ್ ಗೆದ್ದು ಭಾರತಕ್ಕೆ ಗೌರವ ತಂದಿದ್ದ ಈ ಯುವ ಜೋಡಿಗೆ 2020ರ ಸಾಲಿನ ಅರ್ಜುನ ಪ್ರಶಸ್ತಿಗೆ ಭಾಜನರಾಗಿದ್ದರು.