ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿಗಳ ಸಾಲಿಗೆ 'ಕಿನ್ನರಿ'ಯೂ ಸೇರಿದೆ. ವಿಭಿನ್ನ ಕಥಾ ಹಂದರದ 'ಕಿನ್ನರಿ' ಮುಕ್ತಾಯಗೊಂಡು 6 ತಿಂಗಳಷ್ಟೇ ಕಳೆದಿದೆ. ಸುಖಾಂತ್ಯದಿಂದ ಪ್ರಸಾರ ನಿಲ್ಲಿಸಿದ ಕಿನ್ನರಿಗೆ ಬಹಳಷ್ಟು ವೀಕ್ಷಕರಿದ್ದರು.
ಇನ್ನು ಧಾರಾವಾಹಿ ಮುಗಿದ ಬಳಿಕ ನಟ ನಟಿಯರು ಕೆಲವೊಮ್ಮೆ ಬೇರೆ ಧಾರಾವಾಹಿಯಲ್ಲಿ ಬ್ಯುಸಿಯಾಗುತ್ತಾರೆ. ಕೆಲವರು ಅವಕಾಶ ಇಲ್ಲದಿದ್ದರೆ ಬೇರೆ ಚಟುವಟಿಕೆಗಳಲ್ಲಿ ಬ್ಯುಸಿಯಾಗುತ್ತಾರೆ. ಈಗಾಗಲೇ 'ಕುಲವಧು' ಧಾರಾವಾಹಿಯ ನಟ ನಟಿಯರು ಏನು ಮಾಡುತ್ತಿದ್ದಾರೆ ಎಂದು ಓದಿದ್ದೀರಿ, ಇದೀಗ 'ಕಿನ್ನರಿ' ಧಾರಾವಾಹಿ ನಟ-ನಟಿಯರ ಬಗ್ಗೆ ಚಿಕ್ಕ ಮಾಹಿತಿ.
ಕಿರಣ್ ರಾಜ್
'ಕಿನ್ನರಿ' ಧಾರಾವಾಹಿಯಲ್ಲಿ ನಾಯಕ ನಕುಲ್ ಆಗಿ ನಟಿಸುತ್ತಿದ್ದ ಕಿರಣ್ ರಾಜ್ ಮೊದಲ ಧಾರಾವಾಹಿಯಲ್ಲೇ ಕಿರುತೆರೆಪ್ರಿಯರ ಮನ ಸೆಳೆದವರು. ನಕುಲ್ ಆಗಿ ಮನೋಜ್ಞವಾಗಿ ನಟಿಸಿ ಕಿರುತೆರೆ ಲೋಕದಲ್ಲಿ ಮನೆ ಮಾತಾದ ಕಿರಣ್ ಅವರು ಇಂದಿಗೂ ಕಿನ್ನರಿಯ ನಕುಲ್ ಎಂದೇ ಚಿರಪರಿಚಿತ. ಸದ್ಯ 'ಕನ್ನಡತಿ' ಧಾರಾವಾಹಿಯಲ್ಲಿ ನಾಯಕ ಹರ್ಷ ಆಗಿ ನಟಿಸುತ್ತಿರುವ ಕಿರಣ್ ರಾಜ್, ಕಿರುತೆರೆಯಲ್ಲಿ ಬಹಳ ಬ್ಯುಸಿಯಾಗಿದ್ದಾರೆ.
ಭೂಮಿ ಶೆಟ್ಟಿ
ಕಿನ್ನರಿಯ ಮಣಿಯಾಗಿ ಕಿರುತೆರೆ ಲೋಕದಲ್ಲಿ ಹೊಸ ಹವಾ ಸೃಷ್ಟಿಸಿದ ಕುಂದಾಪುರದ ಕುವರಿ ಭೂಮಿ ಶೆಟ್ಟಿ ಕೂಡಾ ಮೊದಲ ಧಾರಾವಾಹಿಯಲ್ಲೇ ವೀಕ್ಷಕರ ಮನದಲ್ಲಿ ಸ್ಥಾನ ಗಳಿಸಿಕೊಂಡವರು. 'ಕಿನ್ನರಿ' ಮುಗಿದದ್ದೇ ತಡ, ಬಿಗ್ಬಾಸ್ ಮನೆಗೆ ಕಾಲಿಟ್ಟ ಭೂಮಿ, ರಾಯಲ್ ಶೆಟ್ರು ಆಗಿ ವೀಕ್ಷಕರಿಗೆ ಪರಿಚಿತರಾದರು. ಸೀಸನ್ 7 ರ ಸ್ಪರ್ಧಿಯಾಗಿದ್ದ ಭೂಮಿಶೆಟ್ಟಿ ಟಾಪ್ 5 ವರೆಗೂ ಬಂದು ನಂತರ ಎಲಿಮಿನೇಟ್ ಆದರು. ಮಹಿಳಾ ದಿನಾಚರಣೆಯಂದು ಕಿರುಚಿತ್ರದಲ್ಲಿ ನಟಿಸಿದ್ದ ಭೂಮಿ, ಲಾಕ್ಡೌನ್ ದಿನಗಳಲ್ಲಿ ಕೀಬೋರ್ಡ್ ನುಡಿಸುವುದನ್ನು ಕಲಿತಿದ್ದಾರಂತೆ. ಅವಕಾಶ ದೊರೆತರೆ ಮತ್ತೆ ನಟಿಸಲು ರೆಡಿ ಎನ್ನುತ್ತಾರೆ ಭೂಮಿ.
ಸಾಗರ್
'ಕಿನ್ನರಿ' ಧಾರಾವಾಹಿಯಲ್ಲಿ ನಾಯಕನ ಗೆಳೆಯ, ಎರಡನೇ ನಾಯಕ ನಂದು ಆಗಿ ನಟಿಸಿದ ಸಾಗರ್ ಕೂಡಾ ಕಿರುತೆರೆಯಲ್ಲಿ ಸಖತ್ ಬ್ಯುಸಿ. ಕಿನ್ನರಿ ಧಾರಾವಾಹಿ ನಂತರ ಕೆಲವು ದಿನಗಳ ಕಾಲ ಆ್ಯಕ್ಟಿಂಗ್ನಿಂದ ದೂರ ಉಳಿದಿದ್ದ ಸಾಗರ್, ಈಗ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಮನಸಾರೆ' ಧಾರಾವಾಹಿಯಲ್ಲಿ ನಾಯಕನಾಗಿ ಅಭಿನಯಿಸುತ್ತಿದ್ದಾರೆ.
ರೋಷ್ನಿ ತೆಲ್ಕರ್
'ಕಿನ್ನರಿ'ಯಲ್ಲಿ ನಾಯಕಿ ಮಣಿ ತಂಗಿ ಐಶ್ವರ್ಯ ಆಗಿ ಅಭಿನಯಿಸುತ್ತಿದ್ದ ರೋಷ್ನಿ ತೆಲ್ಕರ್ ಕೂಡಾ ಕಿರುತೆರೆಯಲ್ಲಿ ಮಿಂಚುತ್ತಿದ್ದಾರೆ. ಸ್ಟಾರ್ ಸುವರ್ಣ ವಾಹಿನಿಯ ' ಮರಳಿ ಬಂದಳು ಸೀತೆ' ಧಾರಾವಾಹಿಯಲ್ಲಿ ಅಂಗದ ಪಾತ್ರಕ್ಕೆ ಜೀವ ತುಂಬಿದ್ದ ರೋಷ್ನಿ. ಈಗ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಸೀತಾವಲ್ಲಭ' ಧಾರಾವಾಹಿಯಲ್ಲಿ ಡ್ರೈವರ್ ಮಗಳಾಗಿ ನಟಿಸುತ್ತಿದ್ದಾರೆ.