ಹಿರಿಯ ನಟಿ ವಿನಯಾ ಪ್ರಸಾದ್ ಸದ್ಯ ಕಿರುತೆರೆ ಪ್ರಿಯರ ಪ್ರೀತಿಯ ಅಖಿಲಾಂಡೇಶ್ವರಿ. ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಪಾರು' ಧಾರಾವಾಹಿಯಲ್ಲಿ ಅರಸನ ಕೋಟೆ ಅಖಿಲಾಂಡೇಶ್ವರಿಯಾಗಿ ನಟಿಸಿ ಮಗದೊಮ್ಮೆ ವೀಕ್ಷಕರ ಮನ ಸೆಳೆದಿರುವ ವಿನಯಾ ಪ್ರಸಾದ್ ಅವರನ್ನು ಹೊಗಳಿದಷ್ಟು ಕಡಿಮೆಯೇ..
ಕೃಷ್ಣ ಭಟ್ ಮತ್ತು ವತ್ಸಲ ದಂಪತಿಯ ಪುತ್ರಿಯಾಗಿ ಉಡುಪಿಯಲ್ಲಿ ಜನಿಸಿದ ವಿನಯಾ ಪ್ರಸಾದ್, ಜಿ ವಿ ಅಯ್ಯರ್ ಅವರ ಮಧ್ವಾಚಾರ್ಯ ಸಿನಿಮಾದಲ್ಲಿ ನಟಿಸುವ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಅಲ್ಲಿಂದ ಅವರು ಮತ್ತೆ ಹಿಂತಿರುಗಿ ನೋಡಲೇ ಇಲ್ಲ. ಕಾಲೇಜ್ ಹೀರೋ, ಗಣೇಶನ ಮದುವೆ, ಪೊಲೀಸನ ಹೆಂಡ್ತಿ, ನೀನು ನಕ್ಕರೆ ಹಾಲು ಸಕ್ಕರೆ, ಗಣೇಶನ ಮದುವೆ, ಗೌರಿ ಗಣೇಶ, ಮೈಸೂರು ಜಾಣ, ಸೂರ್ಯೋದಯ, ಯಾರಿಗೂ ಹೇಳ್ಬೇಡಿ, ಕಲ್ಯಾಣೋತ್ಸವ, ಮುತ್ತಿನಂಥ ಹೆಂಡತಿ, ಮಹಾ ಎಡಬಿಡಂಗಿ ಹೀಗೆ ಬಹಳಷ್ಟು ಸಿನಿಮಾಗಳಲ್ಲಿ ವಿನಯಾ ಪ್ರಸಾದ್ ನಟಿಸಿದ್ದಾರೆ.
'ಆತಂಕ' ಮತ್ತು 'ಬಣ್ಣದ ಹೆಜ್ಜೆಗಳು' ಚಿತ್ರದಲ್ಲಿನ ಅಭಿನಯಕ್ಕಾಗಿ ಉತ್ತಮ ನಟಿ ಪ್ರಶಸ್ತಿ ಪಡೆದಿರುವ ವಿನಯಾ ಪ್ರಸಾದ್ ಕನ್ನಡದ ಬಹುತೇಕ ಎಲ್ಲಾ ಹೆಸರಾಂತ ನಟರೊಂದಿಗೆ ನಟಿಸಿದ್ದಾರೆ. ಬೆಳ್ಳಿತೆರೆ ಜೊತೆ ಕಿರುತೆರೆಯಲ್ಲೂ ನಟಿಸಿ ಸೈ ಎನಿಸಿಕೊಂಡಿರುವ ವಿನಯಾ ಪ್ರಸಾದ್ 'ಸಾವಿತ್ರಿ'ಯಾಗಿ ಕಿರುತೆರೆಗೆ ಕಾಲಿಟ್ಟರು. ಮುಂದೆ ಶಕ್ತಿ, ಸ್ತ್ರೀ, ನಂದ ಗೋಕುಲ, ಅನುಪಮಾ, ಬಂಗಾರ, ನಿತ್ಯೋತ್ಸವ, ಸುಂದರಿ ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿರುವ ಇವರು ಕನ್ನಡ ಮಾತ್ರವಲ್ಲದೆ ಮಲಯಾಳಂ ಭಾಷೆಯ ಧಾರಾವಾಹಿಯಲ್ಲೂ ಅಭಿನಯಿಸುವ ಮೂಲಕ ಪರಭಾಷೆಯಲ್ಲೂ ತಮ್ಮ ನಟನಾ ಕಂಪನ್ನು ಪಸರಿಸಿದ್ದಾರೆ. ನಟನೆ ಜೊತೆಗೆ ಕಾರ್ಯಕ್ರಮಗಳ ನಿರೂಪಣೆ ಕೂಡಾ ಮಾಡಿರುವ ವಿನಯಾ ಪ್ರಸಾದ್ ಅದ್ಭುತ ಗಾಯಕಿಯೂ ಹೌದು. ಸದ್ಯ ಅಖಿಲಾಂಡೇಶ್ವರಿ ಪಾತ್ರಕ್ಕೆ ಜೀವ ತುಂಬುತ್ತಿರುವ ವಿನಯಾ ಪ್ರಸಾದ್ ಬಣ್ಣದ ಲೋಕದಲ್ಲಿ ಇನ್ನಷ್ಟು ಮಿಂಚಲಿ ಎಂಬುದು ನಮ್ಮ ಹಾರೈಕೆ.