ಇತ್ತೀಚಿನ ದಿನಗಳಲ್ಲಿ ಕಲಾವಿದರು ಕೇವಲ ಬಣ್ಣದ ಲೋಕದಲ್ಲಿ ಮಾತ್ರವಲ್ಲದೆ ಇತರ ಉದ್ಯಮಗಳತ್ತ ಆಸಕ್ತಿ ತೋರುತ್ತಿದ್ದಾರೆ. ನಟನೆ ಜೊತೆ ಜೊತೆಗೆ ಬಿಡುವಿನ ಸಮಯದಲ್ಲಿ ಸುಮ್ಮನೆ ಕೂರುವ ಬದಲು ವಿವಿಧ ವ್ಯವಹಾರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ದೀಪಿಕಾ ದಾಸ್
'ನಾಗಿಣಿ' ಧಾರಾವಾಹಿಯ ಅಮೃತಾ ಆಗಿ ಕಿರುತೆರೆ ಲೋಕದಲ್ಲಿ ಹೊಸ ಅಲೆ ಸೃಷ್ಟಿ ಮಾಡಿದ್ದ ದೀಪಿಕಾ ದಾಸ್, ಬಿಗ್ಬಾಸ್ ಮನೆ ಸ್ಪರ್ಧಿಯಾಗಿ ದೊಡ್ಮನೆಯೊಳಗೆ ಕಾಲಿಟ್ಟು, ಅಲ್ಲೂ ಜನರ ಪ್ರೀತಿ ಗಳಿಸಿದರು. 'ದೂದ್ ಸಾಗರ್' ಸಿನಿಮಾ ಮೂಲಕ ಬೆಳ್ಳಿತೆರೆ ಪ್ರವೇಶಿಸಿರುವ ದೀಪಿಕಾ ಈಗ ಉದ್ಯಮ ರಂಗಕ್ಕೂ ಕಾಲಿಟ್ಟಿದ್ದಾರೆ. ಮೊದಲಿನಿಂದಲೂ ಫ್ಯಾಷನ್ ಬಗ್ಗೆ ವಿಶೇಷ ಒಲವು ಹೊಂದಿದ್ದ ದೀಪಿಕಾ ದಾಸ್ ಇದೀಗ ಫ್ಯಾಷನಿಸ್ಟ್ ಆಗಿ ಬದಲಾಗಿದ್ದಾರೆ. ಸಾಂಪ್ರದಾಯಿಕ ಉಡುಗೆಗಳಿಂದ ಹಿಡಿದು ಪಾಶ್ಚಾತ್ಯ ಉಡುಗೆಗಳನ್ನು ಡಿಸೈನ್ ಮಾಡುವ ದೀಪಿಕಾ, ಡಿ ದಾಸ್ ಫ್ಯಾಷನ್ ಆರಂಭಿಸಿದ್ದಾರೆ.
ಶ್ವೇತಾ ಚಂಗಪ್ಪ
ಮಜಾ ಟಾಕೀಸ್ ರಾಣಿಯಾಗಿ ಖ್ಯಾತಿ ಗಳಿಸಿರುವ ಶ್ವೇತಾ ಚಂಗಪ್ಪ, ಸದ್ಯ ತಾಯ್ತನವನ್ನು ಎಂಜಾಯ್ ಮಾಡುತ್ತಿದ್ದು ನಟನೆಯಿಂದ ದೂರ ಉಳಿದಿದ್ದಾರೆ. ಇದರ ಜೊತೆಗೆ ಇತ್ತೀಚೆಗಷ್ಟೇ ಶ್ವೇತಾ ಚಂಗಪ್ಪ ತಮ್ಮದೇ ಆದ ಹೊಸದಾಗಿ ಡಿಸೈನರ್ ಕ್ಲೋಥಿಂಗ್ ಬ್ರ್ಯಾಂಡ್ ಅರಂಭಿಸಿದ್ದು ಅದಕ್ಕೆ ತಾರಾ ಡಿಸೈನರ್ ಕ್ಲೋಥಿಂಗ್ ಬ್ರ್ಯಾಂಡ್ ಎಂದು ಹೆಸರಿಟ್ಟಿದ್ದಾರೆ. ಫ್ಯಾಷನ್ ಸೆನ್ಸ್ ಹೊಂದಿರುವ ಶ್ವೇತಾ ಇದೀಗ ನಟನೆಯ ಜೊತೆಗೆ ಉದ್ಯೋಗದಲ್ಲಿಯೂ ತೊಡಗಿಸಿಕೊಳ್ಳಲು ನಿರ್ಧರಿಸಿದ್ದಾರೆ
ಶ್ವೇತಾ ಪ್ರಸಾದ್
ರಾಧಾ ರಮಣ ಧಾರಾವಾಹಿಯ ಆರಾಧನಾ ಆಗಿ ಮನೆ ಮಾತಾಗಿರುವ ಶ್ವೇತಾ ಪ್ರಸಾದ್ ಕೂಡಾ ಇದೀಗ ಉದ್ಯಮಿಯಾದ್ದಾರೆ. ಮೊದಲಿನಿಂದಲೂ ಸಾವಯವ ಉತ್ಪನ್ನಗಳ ಮೇಲೆ ಒಲವು ಹೊಂದಿರುವ ಶ್ವೇತಾ, ಚರ್ಮದ ಕಾಳಜಿಗೆ ಬೇಕಾಗುವ ವಸ್ತುಗಳ ಜೊತೆಗೆ ದಿನನಿತ್ಯ ಬಳಸುವ ವಸ್ತುಗಳಿಗಾಗಿ ವಿತ್ ಲವ್ ಸ್ಟೋರ್ಸ್ ಆರಂಭಿಸಿದ್ದಾರೆ.
ಚೈತ್ರಾ ವಾಸುದೇವನ್
ಕನ್ನಡದ ಜನಪ್ರಿಯ ನಿರೂಪಕಿಯ ಪೈಕಿ ಒಬ್ಬರಾಗಿರುವ ಚೈತ್ರಾ ವಾಸುದೇವನ್ ಕೂಡಾ ಯಶಸ್ವಿ ಉದ್ಯಮಿ. ನಿರೂಪಣೆ ಜೊತೆಗೆ ಈವೆಂಟ್ ಮ್ಯಾನೇಜ್ಮೆಂಟ್ ಕಂಪೆನಿ ಕೂಡಾ ನಡೆಸುತ್ತಿರುವ ಚೈತ್ರಾ, ನಿರೂಪಣೆ ಮತ್ತು ಉದ್ಯಮ ಎರಡನ್ನು ಜೊತೆಯಾಗಿ ನಿಭಾಯಿಸುತ್ತಾರೆ.
ಶೈನ್ ಶೆಟ್ಟಿ
ಲಕ್ಷ್ಮಿ ಬಾರಮ್ಮ ಧಾರಾವಾಹಿಯಲ್ಲಿ ನಾಯಕ ಚಂದು ಆಗಿ ಅಭಿನಯಿಸಿದ್ದ ಶೈನ್ ಶೆಟ್ಟಿ, ಬಿಗ್ಬಾಸ್ ಸೀಸನ್ 7 ರ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದು ವಿನ್ನರ್ ಪಟ್ಟವನ್ನು ಪಡೆದಿದ್ದಾರೆ. ಧಾರಾವಾಹಿ ನಂತರ ನಟನೆಯಿಂದ ಕೊಂಚ ದೂರವಿದ್ದ ಶೈನ್ ಶೆಟ್ಟಿ ಫುಡ್ ಟ್ರಕ್ ಆರಂಭಿಸಿದ್ದರು. ಗಲ್ಲಿ ಕಿಚನ್ ಮೂಲಕ ಮನೆ ಮಾತಾಗಿರುವ ಶೈನ್ ಶೆಟ್ಟಿ ಹಲವು ವರ್ಷಗಳಿಂದ ಆಹಾರೋದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ.
ಶ್ರುತಿ ನಾಯ್ಡು
ಶ್ರುತಿ ನಾಯ್ಡು ನಟಿಯಾಗಿ ಮಾತ್ರವಲ್ಲದೆ ನಿರ್ಮಾಪಕಿಯಾಗಿ ಗುರುತಿಸಿಕೊಂಡಿದ್ದಾರೆ. ಧಾರಾವಾಹಿ ಮಾತ್ರವಲ್ಲದೆ ಸಿನಿಮಾವನ್ನು ನಿರ್ಮಿಸಿರುವ ಶ್ರುತಿ ಇತ್ತೀಚೆಗೆ ಮೈಸೂರಿನಲ್ಲಿ ಹೋಟೇಲ್ ಉದ್ಯಮವನ್ನು ಆರಂಭಿಸಿದ್ದಾರೆ.