ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ರಂಗನಾಯಕಿ' ಧಾರಾವಾಹಿಯಲ್ಲಿ ನಾಯಕ ಚಿರಂತ್ ತಾಯಿ ಜಯಂತಿ ಆಗಿ ನಟಿಸುತ್ತಿದ್ದ ಸ್ವಾತಿ ಅವರು ಕಾರಣಾಂತರಗಳಿಂದ ಪಾತ್ರದಿಂದ ಹೊರಬಂದಿದ್ದಾರೆ. ಅನಾರೋಗ್ಯದ ಕಾರಣದಿಂದ ನಟಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿರುವ ಅವರು 'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫ್' ಶೋ ಮೂಲಕ ಬಣ್ಣದ ಲೋಕಕ್ಕೆ ಪರಿಚಿತರಾದರು.
ನಂತರ ಶುಭವಿವಾಹ ಧಾರಾವಾಹಿಯಲ್ಲಿ ನೆಗೆಟಿವ್ ರೋಲ್ನಲ್ಲಿ ನಟಿಸಿದ ಸ್ವಾತಿ, ಸದ್ಯ ರಂಗನಾಯಕಿಯ ಜೊತೆಗೆ 'ಸರ್ವಮಂಗಳ ಮಾಂಗಲ್ಯೇ' ಧಾರಾವಾಹಿಯಲ್ಲಿ ಭೈರವಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಧಾರಾವಾಹಿಗೆ ಬರುವ ಮೊದಲೇ ಮಾಡೆಲಿಂಗ್ ಕ್ಷೇತ್ರದಲ್ಲಿ ಮಿಂಚಿದ ಸ್ವಾತಿ, ಸನ್ಸಿಲ್ಕ್ ನಡೆಸಿದ ಮಿಸ್ ಕರ್ನಾಟಕ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡಿದ್ದರು, ಮಾತ್ರವಲ್ಲ ಆ ಸ್ಪರ್ಧೆಯಲ್ಲಿ ಐ ಬ್ಯೂಟಿ, ಫೋಟೋಜೆನಿಕ್ ಪ್ರಶಸ್ತಿಯನ್ನು ಕೂಡಾ ಪಡೆದಿದ್ದರು. ಬಣ್ಣದ ಲೋಕದ ಗ್ಲಾಮರಸ್ ಗೊಂಬೆ ಎಂದೇ ಹೆಸರು ಪಡೆದಿರುವ ಸ್ವಾತಿ, 'ಪುಟ್ಟ ಗೌರಿ ಮದುವೆ' ಯಲ್ಲಿ ಮಂಡೋದರಿ ಆಗಿ ನಟಿಸಿ ಸೈ ಎನಿಸಿಕೊಂಡಿದ್ದರು.
ಶಿವರಾಜ್ ಕುಮಾರ್ ಅವರ 'ಮಾದೇಶ' ಚಿತ್ರದಲ್ಲಿ ಎರಡನೇ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡ ಸ್ವಾತಿ ನಂತರ ಸುಮಾರು 10ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದರು. ಬಣ್ಣದ ಲೋಕದಲ್ಲಿ ಯಶಸ್ಸು ದೊರೆಯಿತು ಎಂದುಕೊಳ್ಳುವಾಗ ಸ್ವಾತಿಗೆ ಅಪಘಾತವಾಗಿ ದೇಹದ ಬಲಭಾಗ ಊನವಾಯಿತು. ಈ ಅಪಘಾತದಿಂದ ಅವರು ಹೊರಬರಲು ಮೂರು ವರ್ಷಗಳು ಬೇಕಾಯಿತು. ನಂತರ 'ಶುಭವಿವಾಹ' ಧಾರಾವಾಹಿ ಮೂಲಕ ಎರಡನೇ ಇನ್ನಿಂಗ್ಸ್ ಆರಂಭಿಸಿದ ಸ್ವಾತಿ ಕೇವಲ ನೆಗೆಟಿವ್ ಪಾತ್ರಗಳಿಗೆ ಸೀಮಿತವಾಗಲಿಲ್ಲ. ಎಲ್ಲಾ ಪಾತ್ರಕ್ಕೂ ಜೀವ ತುಂಬುವ ಸ್ವಾತಿ 'ರಂಗನಾಯಕಿ' ಜಯಂತಿ ಪಾತ್ರದಲ್ಲಿ ಎಲ್ಲರನ್ನೂ ಸೆಳೆದಿದ್ದರು. ಆದರೆ ಆರೋಗ್ಯ ಕೈ ಕೊಟ್ಟಿರುವುದರಿಂದ ಧಾರಾವಾಹಿಯಲ್ಲಿ ನಟಿಸುವುದನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ.