ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಯಾರೇ ನೀ ಮೋಹಿನಿ' ಬೆಳ್ಳಿ ಪಾತ್ರಕ್ಕೆ ಜೀವ ತುಂಬುತ್ತಿರುವ ಚೆಂದುಳ್ಳಿ ಚೆಲುವೆಯ ಹೆಸರು ಸುಷ್ಮಾ ಶೇಖರ್. ವೀಕ್ಷಕರ ಪಾಲಿಗೆ ಪ್ರೀತಿಯ ಬೆಳ್ಳಿ ಆಗಿರುವ ಸುಷ್ಮಾ ನಿಜ ಹೆಸರು ಬಹಳ ಜನರಿಗೆ ತಿಳಿದಿಲ್ಲ.
ಲಂಗ, ದಾವಣಿ ಧರಿಸಿ ಮುಗ್ಧ ನಗು, ನಟನೆ ಮೂಲಕ ಎಲ್ಲರ ಮನ ಸೆಳೆದಿರುವ ಬೆಳ್ಳಿ, ಸದಾ ಕಾಲ ಎಲ್ಲರಿಗೂ ಒಳಿತನ್ನು ಬಯಸುವ ಹೆಣ್ಣು ಮಗಳು. ಬಾಯಿ ತೆರೆದರೆ ಸಾಕು, ಮುತ್ತು ಮಾಮ, ಮುತ್ತು ಮಾಮ ಎಂದು ಪ್ರೀತಿಯಿಂದ ಕರೆಯುವ ಬೆಳ್ಳಿ, ಕಿರುತೆರೆ ವೀಕ್ಷಕರ ಪ್ರೀತಿಯ ಮಗಳು ಕೂಡಾ ಹೌದು. ಜೀ ಕನ್ನಡ ವಾಹಿನಿ ವೀಕ್ಷಕರು ಬೆಳ್ಳಿಯನ್ನು ಮಗಳಾಗಿ ಸ್ವೀಕರಿಸಿಯಾಗಿದೆ. ಆದ್ದರಿಂದಲೇ ಜೀ ಕನ್ನಡ ಕುಟುಂಬ ಅವಾರ್ಡ್ ಕಾರ್ಯಕ್ರಮದಲ್ಲಿ ಸುಷ್ಮಾಗೆ 'ಬೆಸ್ಟ್ ಮಗಳು' ಪ್ರಶಸ್ತಿ ದೊರೆತಿದೆ. ಬೆಳ್ಳಿ ಅಲಿಯಾಸ್ ಸುಷ್ಮಾ ಶೇಖರ್ ಬಣ್ಣದ ಪಯಣ ಆರಂಭಿಸಲು ಅಕ್ಕ ಸುಮಾ ಅವರೇ ಕಾರಣ. ಸುಮಾ ಕೂಡಾ ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ನಟಿಸುತ್ತಿದ್ದರು. ಈ ಮೂಲಕ ಸುಷ್ಮಾಗೆ ಕೂಡಾ ಬಣ್ಣದ ಲೋಕಕ್ಕೆ ಬರಲು ಅನುಕೂಲವಾಯಿತು. ಒಮ್ಮೆ ಅಚಾನಕ್ ಆಗಿ 'ವೆಂಕಟೇಶ ಮಹಿಮೆ' ಧಾರಾವಾಹಿಯಲ್ಲಿ ಅಭಿನಯಿಸುವ ಅವಕಾಶ ದೊರಕಿದ್ದು ಬಣ್ಣದ ಯಾನಕ್ಕೆ ಮುನ್ನುಡಿ ಬರೆಯಲು ಕಾರಣವಾಯ್ತು.
ಮುಂದೆ 'ಕುಸುಮಾಂಜಲಿ' ಧಾರಾವಾಹಿಯಲ್ಲಿ ಕೂಡಾ ನಟಿಸಿದ ಸುಷ್ಮಾ, ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದು 'ಲಕುಮಿ' ಧಾರಾವಾಹಿಯಲ್ಲಿ. ಸುಷ್ಮಾಗೆ ಬಾಲ್ಯದಿಂದಲೂ ಸಾಂಸ್ಕೃತಿಕ ಚಟುವಟಿಕೆಗಳತ್ತ ವಿಶೇಷ ಒಲವು. 'ಲಕುಮಿ', 'ಕನಕ' ಧಾರಾವಾಹಿಗಳ ನಂತರ ವಿದ್ಯಾಭ್ಯಾಸದತ್ತ ಗಮನ ಹರಿಸಿದ ಸುಷ್ಮಾ ಬಿಬಿಎ ಪದವಿ ಪಡೆದಿದ್ದಾರೆ. ಮುಂದೆ ಡಿಗ್ರಿ ಮುಗಿದ ನಂತರ ಶ್ರುತಿ ನಾಯ್ಡು ನಿರ್ಮಾಣ ಸಂಸ್ಥೆಯಿಂದ ನಟಿಸುವ ಆಫರ್ ಬಂತು. ಒಲ್ಲೆ ಎನ್ನದ ಸುಷ್ಮಾ ಇದೀಗ ಬೆಳ್ಳಿಯಾಗಿ ನಿಮ್ಮ ಮುಂದೆ ಬಂದಿದ್ದಾರೆ.
ಯಾವುದೇ ಪಾತ್ರಗಳು ದೊರೆತರೂ ನಾನು ಚಾಲೆಂಜಿಂಗ್ ಆಗಿ ಸ್ವೀಕರಿಸುತ್ತೇನೆ ಎಂದು ಹೇಳುವ ಸುಷ್ಮಾಗೆ ಅಪ್ಪ, ಅಮ್ಮ ಕೂಡಾ ಬೆನ್ನೆಲುಬಾಗಿ ನಿಂತಿದ್ದಾರೆ. 'ಯಾರೇ ನೀ ಮೋಹಿನಿ' ಧಾರಾವಾಹಿಯ ಬೆಳ್ಳಿ ಪಾತ್ರಕ್ಕೆ ಸಾಕಷ್ಟು ಒಳ್ಳೆಯ ಪ್ರತಿಕ್ರಿಯೆ ಬರುತ್ತಿದೆ. ದೊಡ್ಡವರಿಂದ ಹಿಡಿದು ಪುಟ್ಟ ಮಕ್ಕಳು ಕೂಡಾ ನನ್ನನ್ನು ಬೆಳ್ಳಿ ಅಕ್ಕ ಎಂದೇ ಕರೆದಾಗ ಶ್ರಮ ಪಟ್ಟಿದಕ್ಕೂ ಸಾರ್ಥಕ ಎನಿಸುತ್ತದೆ ಎಂದು ಸಂತೋಷ ವ್ಯಕ್ತಪಡಿಸುತ್ತಾರೆ ಸುಷ್ಮಾ. ನಟನೆಯಲ್ಲಿ ನಾನು ಪಳಗಿದ್ದೇನೆ ಎಂದರೆ ಅದಕ್ಕೆ ನಿರ್ದೇಶಕರೇ ಕಾರಣ, ರವಿ ಬಸಪ್ಪನ ದೊಡ್ಡಿ, ರಮೇಶ್ ಇಂದಿರಾ, ಶ್ರುತಿ ನಾಯ್ಡು, ಸಂತೋಷ್ ಹಾಸನ್ ಅವರು ನನ್ನ ತಪ್ಪುಗಳನ್ನು ತಿದ್ದಿದ್ದರಿಂದಲೇ ನಾನು ಇಂದು ಕಲಾವಿದೆಯಾಗಿ ರೂಪುಗೊಳ್ಳಲು ಸಾಧ್ಯವಾಯಿತು ಎನ್ನಲು ಮರೆಯುವುದಿಲ್ಲ ಬೆಳ್ಳಿ.